ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯು ಮೊದಲ ಅಲೆಗಿಂತ ಹೆಚ್ಚಾಗಿಯೇ ಪರಿಣಾಮ ಬೀರಿತ್ತು. ಮೊದಲ ಅಲೆಯ ಸಾವು, ನೋವುಗಳನ್ನೆಲ್ಲ ಎರಡನೇ ಅಲೆ ಧೂಳಿಪಟ ಮಾಡಿತು. ತಜ್ಞರ ಎಚ್ಚರಿಕೆ ಇದ್ದರೂ ಸರ್ಕಾರ ಎಚ್ಚೆತ್ತುಕೊಳ್ಳುವುದು ತಡವಾಯಿತು. ಆಕ್ಸಿಜನ್, ಬೆಡ್, ಔಷಧಿ ಕೊರತೆ ಎದುರಿಸಬೇಕಾಯಿತು. ಈ ಎಡವಟ್ಟಿನಿಂದ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ, ಮೂರನೇ ಅಲೆಗೂ ಮುನ್ನವೇ ಹೊಸ ರೂಪಾಂತರಿಗಳ ಪತ್ತೆಗೆ ತಯಾರಿ ನಡೆಸಿದೆ.
ಜೀನೋಮ್ ಸೀಕ್ವೆನ್ಸಿಂಗ್ ಸ್ಯಾಂಪಲ್ಗಳ ಸಂಗ್ರಹ ಹೆಚ್ಚಳಕ್ಕೆ ಎಲ್ಲಾ ಜಿಲ್ಲೆಗಳಿಗೆ ಸೂಚನೆ ನೀಡಿದ್ದು, ಸೀಕ್ವೆನ್ಸಿಂಗ್ಗೆ ಸ್ಯಾಂಪಲ್ ಕಳಿಸಲು ಮಾನದಂಡ ನೀಡಿದೆ. ಪ್ರತಿ 15 ದಿನಗಳಿಗೊಮ್ಮೆ ಜೀನೋಮ್ ಸೀಕ್ವೆನ್ಸಿಂಗ್ಗಾಗಿ ಸ್ಯಾಂಪಲ್ ಕಳಿಸಿಕೊಡಬೇಕು. ಒಂದು ಸೆಂಟಿನಲ್ ಸೈಟ್ಸ್ ನಿಂದ 15 ದಿನಕ್ಕೆ ಒಮ್ಮೆ 150 ಸ್ಯಾಂಪಲ್ಸ್ ಕಳಿಸಬೇಕು. ಸ್ಯಾಂಪಲ್ ಕಳಿಸುವಾಗ 5 ಪ್ರಮುಖ ಅಂಶಗಳನ್ನ ಪರಿಗಣಿಸುವಂತೆ ಸೂಚಿಸಿದ್ದು, ಅವುಗಳು ಕೆಳಕಂಡಂತಿವೆ..
1.ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಪಾಸಿಟಿವ್ ಕಂಡು ಬಂದಿದ್ದರೆ ಅವರ ಸ್ಯಾಂಪಲ್ ಕಳಿಸಬೇಕು
2.ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸೋಂಕಿಗೆ ಒಳಗಾಗಿರುವವರ ಸ್ಯಾಂಪಲ್ಗಳು
3.ಸೋಂಕಿನ ತೀವ್ರತೆ ಹೆಚ್ಚಿರುವವರ ಸ್ಯಾಂಪಲ್‌ಗಳನ್ನು ಕಳಿಸಬೇಕು
4.ಎರಡು ಡೋಸ್ ವ್ಯಾಕ್ಸಿನ್ ತೆಗೆದುಕೊಂಡು 15 ದಿನಗಳ ಬಳಿಕ ಸೋಂಕಿತರಾದರೆ ಅವರ ಸ್ಯಾಂಪಲ್ ಸೀಕ್ವೆನ್ಸಿಂಗ್ಗೆ ಕಳಿಸಬೇಕು
5.ಕೋವಿಡ್ ಸೋಂಕಿಗೆ ಒಳಗಾದ ಮಕ್ಕಳ ಸ್ಯಾಂಪಲ್ ಗಳನ್ನ ಸೀಕ್ವೆನ್ಸಿಂಗ್ಗೆ ಕಳಿಸಬೇಕು
ಪ್ರತಿ ಜಿಲ್ಲೆಗಳಿಂದ ಈ ಐದು ಮಾನದಂಡಗಳ ಆಧಾರದ ಮೇಲೆ ಸ್ಯಾಂಪಲ್ ಕಳಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈ ಮೂಲಕ ರೂಪಾಂತರಿ ಶಕ್ತಿಯನ್ನು ಹೇಗೆಲ್ಲ ಕುಗ್ಗಿಸಬಹುದು ಅಂತ ತಯಾರಿ ನಡೆಯುತ್ತಿದೆ. ಸದ್ಯ, ರೂಪಾಂತರಿ ಪತ್ತೆಯನ್ನು ನಿಮ್ಹಾನ್ಸ್ ಹಾಗೂ ಎನ್ಸಿಬಿಎಸ್ ಲ್ಯಾಬ್ಗಳಲ್ಲಿ ಸೀಕ್ವೇನ್ಸಿಂಗ್ ಮಾಡಲಾಗುತ್ತಿದೆ.
ಇದನ್ನೂ ಓದಿ:ನೆಗಡಿಯಾಗಿ ಮೂವರು ಮಕ್ಕಳು ಸಾವು.. ಬಂದೇ ಬಿಡ್ತಾ COVID 3ನೇ ಅಲೆ!?
ಇತ್ತ, ವೈರಾಣು ಪತ್ತೆಗಾಗಿ 7 ಕಡೆ ಜಿನೋಮಿಕ್ ಲ್ಯಾಬ್ ಗಳನ್ನ ತೆರೆಯಲಾಗುತ್ತಿದೆ. 5 ವೈದ್ಯಕೀಯ ಕಾಲೇಜು ಹಾಗೂ ಆರೋಗ್ಯ ಇಲಾಖೆಯಡಿ ಬರುವ ಆಸ್ಪತ್ರೆಯಲ್ಲಿ ಲ್ಯಾಬ್ ಆರಂಭಿಸಲು ಯೋಜಿಸಿದ್ದು, ತಯಾರಿ ನಡೆಯುತ್ತಿದೆ. ಹೆಚ್ಚು ಹೆಚ್ಚು ಜಿನೋಮಿಕ್ ಟೆಸ್ಟ್ ಆದಷ್ಟು ಕೋವಿಡ್ ರೂಪಾಂತರಿಯ ಹೊಸ ಹೊಸ ತಳಿ ಪತ್ತೆ ಮಾಡಬಹುದು ಹಾಗೂ ಬಹುಬೇಗ ಚಿಕಿತ್ಸೆಯನ್ನ ನೀಡಬಹುದಾಗಿದೆ.