ಬೆಂಗಳೂರು: ಶಾಲಾ-ಕಾಲೇಜುಗಳ ಆರಂಭದ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ಪರಿಸ್ಥಿತಿ ನೋಡಿಕೊಂಡು ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಕೊರೊನಾ ಸೋಂಕು ಹೆಚ್ಚು ಇರುವ ಬಳ್ಳಾರಿ, ದಕ್ಷಿಣ ಕನ್ನಡ, ಹಾಸನ, ಧಾರವಾಡ, ಬೆಳಗಾವಿ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ವಿಡಿಯೋ ಸಂವಾದ ನಡೆಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾವಿನ ಸಂಖ್ಯೆ ಮತ್ತು ಸೋಂಕಿನ ಸಂಖ್ಯೆ ಹೆಚ್ಚಿರುವ ಬಗ್ಗೆ ವಿವರವಾದ ಮಾಹಿತಿ ಪಡೆದಿದ್ದೇನೆ. ಕಳೆದ ಒಂದು ವಾರದಿಂದ ಇದರ ನಿಯಂತ್ರಣಕ್ಕೆ ಕಠಿಣ ಪ್ರಯತ್ನ ನಡೆಯುತ್ತಿದೆ. ಎಲ್ಲರ ಪ್ರಯತ್ನದಿಂದ ಸಾವಿನ ಸಂಖ್ಯೆ ಶೇಕಡಾ ಒಂದಕ್ಕಿಂತ ಕಡಿಮೆಯಾಗಿದೆ. ತುಮಕೂರು, ಮೈಸೂರು, ಧಾರವಾಡ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾವಿನ ಮತ್ತು ಸೋಂಕಿತರ ಸಂಖ್ಯೆ ಹೆಚ್ಚಿದೆ. ಉಳಿದ ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಮುಂದಿನ ಒಂದು ವಾರದಲ್ಲಿ ಇನ್ನಷ್ಟು ನಿಯಂತ್ರಣಕ್ಕೆ ಶ್ರಮಿಸಿ ಆನಂತರ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಕರ್ನಾಟಕದಲ್ಲಿ ಕೊರೊನಾ ಸೋಂಕಿತರ, ಸಾವೀಗೀಡಾಗುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಅದನ್ನು ಆದಷ್ಟು ನಿಯಂತ್ರಣಕ್ಕೆ ತರಲು ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ಮೋದಿ ಮಾರ್ಗದರ್ಶನ ಮಾಡಿದ್ದರು. ಆ ನಿಟ್ಟಿನಲ್ಲಿ ಇಂದು 10 ಜಿಲ್ಲೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಗತ್ಯ ಕ್ರಮಕ್ಕೆ ಸೂಚಿಸಿರುವುದಾಗಿ ಸಿಎಂ ತಿಳಿಸಿದರು.