ಬೆಂಗಳೂರು : ಕಳೆದ ಎಂಟು ವರ್ಷಗಳ ಹಿಂದೆ ನಗರದ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಉದ್ಯೋಗಿ ಜ್ಯೋತಿ ಉದಯ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿ ಮಧುಕರ್ ರೆಡ್ಡಿಗೆ 12 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ.
2013ರ ನವೆಂಬರ್ 19ರಂದು ಜ್ಯೋತಿ ಉದಯ್ ಮೇಲೆ ಅಪರಾಧಿ ಮಧುಕರ್ ರೆಡ್ಡಿ ಹಲ್ಲೆ ಮಾಡಿದ್ದ. ಈ ಸಂಬಂಧ ನಗರ ಪೊಲೀಸರು ಮಧುಕರ್ನನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಬಳಿಕ ಮೂರು ವರ್ಷಗಳ ಕಾಲ ವಿಚಾರಣೆ ನಡೆಸಿದ 65ನೇ ಸಿಸಿಹೆಚ್ ನ್ಯಾಯಾಲಯ ಇಂದು ಅಪರಾಧಿಗೆ 12 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಈ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ ಜ್ಯೋತಿ ಉದಯ್, ನ್ಯಾಯಾಲಯದ ತೀರ್ಪು ನನಗೆ ತೀವ್ರ ಸಂತಸ ತಂದಿದೆ. ನ್ಯಾಯಾಲಯ ಹಾಗೂ ಪೊಲೀಸ್ ವ್ಯವಸ್ಥೆ ಮೇಲೆ ನಂಬಿಕೆಯಿತ್ತು. ನನ್ನ ನಂಬಿಕೆ ಹುಸಿಯಾಗಿಲ್ಲ.
ನಿಜಕ್ಕೂ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಬೇಕಿತ್ತು ಅನ್ನಿಸಿದ್ರೂ ನ್ಯಾಯಾಲಯ 12 ವರ್ಷಗಳ ಕಾಲ ಶಿಕ್ಷೆ ನೀಡಿರುವುದು ಖುಷಿ ತಂದಿದೆ ಎಂದರು.