ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಶರಣಾದ ಆರೋಪಿ ಆದಿತ್ಯ ರಾವ್ನನ್ನು ಪೊಲೀಸರು 1ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದರು. ಬಳಿಕ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಯನ್ನು ಮಂಗಳೂರಿಗೆ ಕರೆದೊಯ್ಯಲು ಅನುಮತಿ ನೀಡಿದ್ದಾರೆ.
ಬಾಂಬ್ ಇಟ್ಟ ಆರೋಪಿಯನ್ನ ಹಲಸೂರುಗೇಟ್ ಪೊಲೀಸರು 1ನೇ ಎಸಿಎಂಎಂ ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು. ಇದೇ ವೇಳೆ ಮಂಗಳೂರು ಪೊಲೀಸರು ನ್ಯಾಯಾಲಯದ ಎದುರು ಹಾಜರಾಗಿದ್ದರು. ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೆ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದರು. ಹೀಗಾಗಿ ಆರೋಪಿ ಆದಿತ್ಯ ರಾವ್ನನ್ನ ನ್ಯಾಯಾಲಯ ಮಂಗಳೂರು ಪೊಲೀಸರ ವಶಕ್ಕೆ ನೀಡಿದೆ. ಸದ್ಯ ಆರೋಪಿಯನ್ನ ಮಂಗಳೂರ ಪೊಲೀಸರು ಟ್ರಾನ್ಸಿಟ್ ವಾರೆಂಟ್ ಮೂಲಕ ಏರ್ಪೋರ್ಟ್ಗೆ ಕರೆದೊಯ್ದಿದ್ದಾರೆ.
ನ್ಯಾಯಾಲಯ ನಾಳೆ 5.30ರೊಳಗೆ ಮಂಗಳೂರು ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಬೇಕು ಎಂದು ಆದೇಶಿಸಿದೆ. ಹೀಗಾಗಿ ಮಂಗಳೂರು ಪೊಲೀಸರು ಇಂದು ಆರೋಪಿಯನ್ನ ತಮ್ಮ ವಶದಲ್ಲೇ ಇರಿಸಿಕೊಂಡು ನಾಳೆ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಆರೋಪಿಯನ್ನ ಎಸಿಎಂಎಂ ನ್ಯಾಯಾಲಯದಿಂದ ಬಹಳ ಭದ್ರತೆಯಿಂದ ಪೊಲೀಸರು ಕರೆದೊಯ್ದಿದ್ದಾರೆ.