ಬೆಂಗಳೂರು: ಎಲ್ಲ ಕ್ಷೇತ್ರಗಳನ್ನ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
2024ರವರೆಗೂ ಅನುಷ್ಠಾನಕ್ಕೆ ಬರಲಿರೋ ಪ್ರಣಾಳಿಕೆ ಇದು. ಸದ್ಯ ದೇಶ ಗಾಯಗೊಂಡಿದ್ದು, ಅದನ್ನ ಸರಿಪಡಿಸೋ ಸಮಯ ಬಂದಿದೆ. ಈ ಐದು ವರ್ಷದಲ್ಲಿ ಸಾಮಾಜಿಕವಾಗಿ ದೇಶಕ್ಕೆ ದೊಡ್ಡ ಪೆಟ್ಟಾಗಿದೆ ಎಂದರು. ರೈತರಿಗೆ, ಸಾಮಾನ್ಯರಿಗೆ ದೇಶದಲ್ಲಿ ಯಾವುದೇ ರಕ್ಷಣೆ ಇಲ್ಲ. ಆರ್ಥಿಕ ಸಂಕಷ್ಟ ದೇಶ ಎದುರಿಸುತ್ತಿದೆ. ಆದ್ರೆ ಅದನ್ನ ತೋರಿಸಿಕೊಡುತ್ತಿಲ್ಲ. ನಿರುಪಯುಕ್ತ ಹಣಕಾಸು ಸಚಿವ ದೇಶಕ್ಕಿದ್ದಾರೆ. ನೋಟ್ ಬ್ಯಾನ್ ಅವಶ್ಯಕತೆಯೇ ಇಲ್ಲ. ಆರ್ಥಿಕ ಅಭದ್ರತೆ ದೇಶವನ್ನು ಕಾಡುತ್ತಿದೆ. ಭದ್ರತೆ ಬಗ್ಗೆ ಹೇಳೋ ಇವರು, ಕಾಶ್ಮೀರದಲ್ಲಿ ನೆಮ್ಮದಿ ಇಲ್ಲದಂತೆ ಮಾಡಿದ್ದಾರೆ. ದೇಶದಲ್ಲಿ ಹಿಂಸಾತ್ಮಕ ಘಟನೆಗಳು ಹೆಚ್ಚುತ್ತಿವೆ ಎಂದರು.
ಪ್ರಬಲ ಪ್ರಣಾಳಿಕೆ
ಇಂಧನ ಜಿಎಸ್ಟಿ ವ್ಯಾಪ್ತಿಯಲ್ಲಿ ತರುವ, ಮಹಿಳಾ ಸಬಲೀಕರಣ, ಶಿಕ್ಷಣ ಕ್ಷೇತ್ರಕ್ಕೆ ಉತ್ತಮ ಕೊಡುಗೆ ಪ್ರಣಾಳಿಕೆಯಲ್ಲಿ ಸಿಕ್ಕಿದೆ. ಸಾಮಾಜಿ, ಆರ್ಥಿಕ ಚಿಂತನೆ ಪ್ರಣಾಳಿಕೆಯಲ್ಲಿ ಇದೆ. ಡಾ. ಮನಮೋಹನ್ ಸಿಂಗ್ ಹಾಗೂ ಪಿ. ಚಿದಂಬರಂ ಇದ್ದಾರೆ ಎಂದರು.
ಸುಳ್ಳು ಹೇಳುವುದು ಬಿಜೆಪಿ ಡಿಎನ್ಎ. ಜನರನ್ನು ವಂಚಿಸುವ, ಈಡೇರಿಸಲಾಗದ ಭರವಸೆ ನಾವು ನೀಡಲ್ಲ. ಅನಗತ್ಯವಾಗಿ ಜನರನ್ನು ಕೆರಳಿಸುವ ಭರವಸೆ ಇಲ್ಲ. ಜನರ ಹಕ್ಕು, ಖಾಸಗಿ ಬದುಕಲ್ಲಿ ಪ್ರವೇಶಿಸದೇ ಮುಕ್ತವಾಗಿ ಬೆಳೆಯಲು, ಯಾವುದೇ ಅಂಜಿಕೆ ಇಲ್ಲದೇ ಬದುಕುವ ಅವಕಾಶ ಮಾಡಿಕೊಡಲಾಗಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ. ಎಲೆಕ್ಟ್ರೋಲ್ ಬಾಂಡ್ ಎಂಬ ಭ್ರಷ್ಟಾಚಾರ ಮಾಡುವವರಿಗೆ ಕಡಿವಾಣ ಬೀಳಬೇಕು. ಯಾರು ಬೇಕಾದರೂ ಹಣ ನೀಡಬಹುದಾದ ಕಾನೂನಾತ್ಮಕ ಭ್ರಷ್ಟಾಚಾರ ನಿಲ್ಲಿಸುತ್ತೇವೆ ಎಂದು ವಿವರಿಸಲಾಗಿದೆ.
ಎಲ್ಲಾ ವರ್ಗದ ಜನರಿಗೆ, ಆರ್ಥಿಕ ಬೆಳವಣಿಗೆಗೆ ಶಕ್ತಿಶಾಲಿ ದಾಖಲೆ ಪ್ರಣಾಳಿಕೆ ರೂಪದಲ್ಲಿ ಬಂದಿದೆ. ಟೀಕಿಸುವ ಅರ್ಹತೆಯನ್ನು ಬಿಜೆಪಿ ಕಳೆದುಕೊಂಡಿದೆ. ಟೀಕಿಸುವ ಕಾರ್ಯ ಅವರು ಮಾಡಲಿ, ಪ್ರಯೋಜನವಿಲ್ಲ. ನರೇಂದ್ರ ಮೋದಿ ಪ್ರಧಾನಮಂತ್ರಿ ಅಲ್ಲ, ಪ್ರಚಾರ ಮಂತ್ರಿ ಆಗಿದ್ದಾರೆ. ಕಾಂಗ್ರೆಸ್ ಆ ರೀತಿಯ ಪಕ್ಷ ಸಲ್ಲ. ರಾಹುಲ್ ಅಂತಹ ನಾಯಕರಲ್ಲ. ನಾವು ಅಧಿಕಾರಕ್ಕೆ ಬರುತ್ತೇವೆ. ಇಂದಿನ ನಮ್ಮ ಪ್ರಣಾಳಿಕೆ ಶಕ್ತಿಯುತವಾಗಿದೆ ಎಂದರು.