ಬೆಂಗಳೂರು: ‘ಕಾಂಗ್ರೆಸ್ ಪಕ್ಷದ ಧ್ವಜವೇ ನನ್ನ ಧರ್ಮ. ಇಲ್ಲಿ ಯಾರೂ ಹೆಚ್ಚಲ್ಲ, ಯಾರೂ ಕಡಿಮೆ ಇಲ್ಲ. ಎಲ್ಲರೂ ಸಮಾನರು. ಇಲ್ಲಿ ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆಗೆ ಆದ್ಯತೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ನಗರದ ಕ್ವೀನ್ಸ್ ರಸ್ತೆಯಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಸುಮಾರು ಆರು ತಾಸುಗಳ ಸುದೀರ್ಘ ಕಾಲ ಮಾಜಿ ಉಪಾಧ್ಯಕ್ಷರು, ಜಿಲ್ಲಾಧ್ಯಕ್ಷರು, ಮಾಜಿ ಕಾರ್ಯದರ್ಶಿಗಳು, ಖಜಾಂಚಿಗಳು, ಸಮನ್ವಯಕಾರರ ಜತೆ ಪಕ್ಷ ಸಂಘಟನೆ, ಬಲವರ್ಧನೆ ಕುರಿತು ಸರಣಿ ಸಭೆಗಳನ್ನು ನಡೆಸಿದರು. ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ ಹಾಗೂ ಸಲೀಂ ಅಹಮದ್ ಅವರೂ ಸಭೆಯಲ್ಲಿ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು ‘ಪಕ್ಷವನ್ನು ಕಟ್ಟಿ, ಗಟ್ಟಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದವರಿಗೆ ಅಧಿಕಾರ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ನೀವು ಅಧಿಕಾರದ ಹಿಂದೆ ಹೋಗುವ ಅಗತ್ಯವೇ ಇರುವುದಿಲ್ಲ. ಪಕ್ಷದಲ್ಲಿ ಶ್ರಮಕ್ಕೆ ಮಾತ್ರ ಬೆಲೆ ಇದೆಯೇ ಹೊರತು, ಪ್ರಭಾವಕ್ಕೆ ನಾನು ಮಣಿಯುವುದಿಲ್ಲ. ಎಲ್ಲರನ್ನು ಒಟ್ಟಿಗೆ ಕೆರೆದುಕೊಂಡು ಹೋಗುವ ಸಂಕಲ್ಪ ನನ್ನದು ಎಂದರು.
ನನಗೆ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇದೆ. ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಎಲ್ಲರೂ ಸಮಾನರೆ. ನನಗೆ ಮತ್ತು ಕಾರ್ಯಾಧ್ಯಕ್ಷರಿಗೆ ಪಕ್ಷ ಅಧಿಕಾರ ಕೊಟ್ಟಿಲ್ಲ, ಜವಾಬ್ದಾರಿ ಕೊಟ್ಟಿದೆ. ಅದನ್ನು ಸಮರ್ಥವಾಗಿ ನಿಭಾಯಿಸಲು ನಿಮ್ಮೆಲ್ಲರ ಸಹಕಾರ, ಕಾರ್ಯನಿಷ್ಠೆ ಹಾಗೂ ಬದ್ಧತೆ ಬಹಳ ಮುಖ್ಯ. ಕಾರ್ಯಕರ್ತರಿಲ್ಲದೇ ನಾಯಕರೂ ಗಟ್ಟಿಯಾಗುವುದಿಲ್ಲ, ಪಕ್ಷವೂ ಗಟ್ಟಿಯಾಗುವುದಿಲ್ಲ. ಕಾರ್ಯಕರ್ತರಿದ್ದರೆ ಮಾತ್ರ ಎಲ್ಲರಿಗೂ ಶಕ್ತಿ ಬರುತ್ತದೆ. ಹೀಗಾಗಿ ಇಲ್ಲಿ ಕಾರ್ಯಕರ್ತರು ಹಾಗೂ ನಾಯಕರು ಸಮಾನ ಭಾವದಿಂದ ದುಡಿಯುವ ಅವಶ್ಯಕತೆ ಇದೆ. ನಮ್ಮ ಸಾಮರ್ಥ್ಯ ಮತ್ತು ಶಕ್ತಿಯನ್ನು ಬಿಜೆಪಿ ವಿರುದ್ಧ ಹೋರಾಡಲು, ಪಕ್ಷವನ್ನು ಕಟ್ಟುವುದಕ್ಕಾಗಿ ವಿನಿಯೋಗವಾಗಬೇಕು. ಆ ಮೂಲಕ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ತಿಳಿಸಿದರು.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ವೇಣುಗೋಪಾಲ್ ನಿಮ್ಮೆಲ್ಲರ ಭಾವನೆ ಮತ್ತು ಅಭಿಪ್ರಾಯ ಕ್ರೂಡಿಕರಿಸಿ ನನಗೆ ಈ ಜವಾಬ್ದಾರಿ ವಹಿಸಿದ್ದಾರೆ. ನಿಮ್ಮ ಹಾಗೂ ಕಾರ್ಯಕರ್ತರ ಪರವಾಗಿ ನಾನು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಪಕ್ಷದಲ್ಲಿ ಈ ಹಿಂದೆ ಏನಾಗಿದೆ ಎಂಬುದರ ಬಗ್ಗೆ ಪೋಸ್ಟ್ ಮಾರ್ಟಂ ಬೇಡ. ಮುಂದೇನಾಗಬೇಕು ಎಂಬುದರ ಬಗ್ಗೆ ಗಮನ ಹರಿಸೋಣ ಎಂದರು.
ನಾವು ನಡೆದು ಬಂದ ದಾರಿಯನ್ನು ಹಿಂತಿರುಗಿ ನೋಡಿಕೊಳ್ಳಬೇಕು. ಆಗ ಮಾತ್ರ ನಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲು ಸಾಧ್ಯ. ನನಗೆ ಯಾವುದೇ ಒಂದು ಜಾತಿ, ಗುಂಪು, ಧರ್ಮದ ಮೇಲೆ ನಂಬಿಕೆ ಇಲ್ಲ. ಎಲ್ಲರೂ ಸಮಾನರೆ. ಹಿಂದೆ ರಾಹುಲ್ ಗಾಂಧೀಜಿ ಅವರು ರಾಷ್ಟ್ರ ಧ್ವಜವೇ ನನ್ನ ಧರ್ಮ ಎಂದಿದ್ದರು. ಅದೇ ರೀತಿ ಕಾಂಗ್ರೆಸ್ ಬಾವುಟವೇ ನನ್ನ ಧರ್ಮ. ಪಕ್ಷ ಗಟ್ಟಿಗೊಳಿಸಲು ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ತೆಗೆದುಕೊಂಡು ಹೋಗುತ್ತೇನೆ. ಇದಕ್ಕೆ ನೀವೂ ಕೈಜೋಡಿಸಬೇಕು ಎಂದು ಕರೆಕೊಟ್ಟರು.