ರೆಬೆಲ್‍ಗಳು ತಣ್ಣಗಾಗಿದ್ದಾರೆ. ಇವರಿಗೆ ಉತ್ಸಾಹ ತುಂಬಬೇಕಿದ್ದ ಬಿಜೆಪಿಗರು ಕೂಡ ಆಡಿಯೋ ಗಂಡಾಂತರದಲ್ಲಿ ಸಿಲುಕಿ ತೊಳಲಾಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಮತ್ತೆ ಸುಗಮ ಪಥಕ್ಕೆ ವಾಪಾಸಾಗಿದ್ದು, ನಿಧಾನವಾಗಿ ನಿತ್ಯದ ಚಟುವಟಿಕೆ ಆರಂಭಿಸಿದೆ. ಆದಾಗ್ಯೂ ನಾಲ್ವರು ಕಾಂಗ್ರೆಸ್ ಅತೃಪ್ತ ಶಾಸಕರ ನಡೆ ಇನ್ನೂ ನಿಗೂಢವಾಗಿದೆ.
ಎಲ್ಲರ ಕೈಗೆ ಸಿಕ್ಕಿ ಕೂಡ ಎಲ್ಲಿಯೋ ಮತ್ತೆ ತೆರೆಮರೆಯಲ್ಲಿ ಸರ್ಕಾರ ಬೀಳಿಸುವ ಯತ್ನ ನಡೆಸಿದ್ದಾರೇನೋ ಎನ್ನುವ ಗುಮಾನಿ ಕಾಡುತ್ತಲೇ ಇದೆ. ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಡಾ. ಉಮೇಶ್ ಜಿ. ಜಾಧವ್ ರಾಜೀನಾಮೆ ನೀಡುವುದು ಖಚಿತವಾಗಿದೆ. ಉಮೇಶ್ ಜಾಧವ್ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಲಬುರುಗಿಯಿಂದ ಸಂಸದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸೆಣೆಸುವುದು ಖಚಿತವಾಗಿದೆ ಎಂಬ ಮಾತಿದೆ. 90 ಸಾವಿರದಷ್ಟಿರುವ ಲಂಬಾಣಿ ಜನಾಂಗದ ಮತ ನಂಬಿ ಅವರು ಕಣಕ್ಕಿಳಿಯುತ್ತಿದ್ದಾರೆ ಎನ್ನಲಾಗುತ್ತಿದೆ.
ಮಲ್ಲಿಕಾರ್ಜುನ ಖರ್ಗೆ ಎದುರು ಹಾಕಿಕೊಂಡವರಿಗೆ ಉಳಿಗಾಲವಿಲ್ಲ:
ಅಂದಹಾಗೆ ಅನಕ್ಷರಸ್ಥರೇ ಹೆಚ್ಚಿರುವ ಕಲಬುರುಗಿ ಜಿಲ್ಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಹಿಡಿತ ದೊಡ್ಡದಿದೆ. ಇವರನ್ನು ಧಿಕ್ಕರಿಸಿ ಪಕ್ಷ ತೊರೆದ ಬಾಬುರಾವ್ ಚಿಂಚನಸೂರು ಹಾಗೂ ಮಾಲೀಕಯ್ಯ ಗುತ್ತೇದಾರ್ಗೆ ತಲೆ ಎತ್ತದ ಸ್ಥಿತಿ ಎದುರಾಗಿದೆ. ರಾಜಕೀಯವಾಗಿ ಎರಡು, ಮೂರು ಜಿಲ್ಲೆಯಲ್ಲಿ ಪ್ರಭಾವ ಹೊಂದಿದ್ದ ಇವರು ತಮ್ಮ ಕ್ಷೇತ್ರದ ಜನರನ್ನೇ ಮೆಚ್ಚಿಸಲಾಗದೇ ಹೋಗಿದ್ದಾರೆ. ಚಿಂಚನಸೂರು ಮೌನಕ್ಕೆ ಜಾರಿದ್ದರೆ, ಮಾಲೀಕಯ್ಯ ಗುತ್ತೇದಾರ್ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದಾರೆ.
ಇದೀಗ ಕೇಳಿಬರುತ್ತಿರುವ ಮಾತು, ಜಿಲ್ಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಎದುರು ಹಾಕಿಕೊಂಡವರಿಗೆ ಉಳಿಗಾಲವಿಲ್ಲ. ರಾಜಕೀಯವಾಗಿ ಅವರು ತಲೆ ಎತ್ತದಂತೆ ಮಾಡುತ್ತಾರೆ ಎಂಬ ಮಾತಿದೆ. ಇದರಿಂದಲೇ ಅವರು ಕಲಬುರುಗಿಯಲ್ಲಿ ಸೋಲಿಲ್ಲದ ಸರದಾರನಾಗಿರುವುದು. ಈ ಸಾರಿ ಕೂಡ ಅವರೇ ಗೆಲ್ಲುತ್ತಾರೆ ಹಾಗೂ ಇದೇ ಅವರು ಸ್ಪರ್ಧಿಸುವ ಕಡೆಯ ಚುನಾವಣೆ ಆಗಲಿದೆ ಎನ್ನಲಾಗುತ್ತಿದೆ. ಮುಂದಿನ ಅವಧಿಗೆ ಅವರು ವಯಸ್ಸು ಹಾಗೂ ಅನಾರೋಗ್ಯದ ಕಾರಣ ನೀಡಿ ಕಣದಿಂದ ಹಿಂದೆ ಸರಿಯುತ್ತಾರೆ ಎನ್ನಲಾಗುತ್ತಿದೆ.
ಖುದ್ದು ಅವರೇ ಆಚೆ ಬರಬೇಕೇ ಹೊರತು ಅವರನ್ನು ಸೋಲಿಸುವ ಶಕ್ತಿ ಇನ್ನೊಬ್ಬರಿಗೆ ಇಲ್ಲ ಎನ್ನಲಾಗುತ್ತಿದೆ. ಧೈರ್ಯ ತೋರಿಸಿದವರೆಲ್ಲಾ ಮಣ್ಣು ಮುಕ್ಕಿದ್ದು, ಇದೀಗ ಉಮೇಶ್ ಜಾಧವ್ ಕೂಡ ಒಂದು ಕೈ ನೋಡಲು ಮುಂದಾದರೆ ಸಂಕಷ್ಟಕ್ಕೆ ಸಿಲುಕುತ್ತಾರೆ ಎನ್ನಲಾಗುತ್ತಿದೆ.
ರಮೇಶ್ ಜಾರಕಿಹೊಳಿ 'ಕೈ' ಬಿಟ್ಟರೆ ಕಷ್ಟ:
ಸಹೋದರರೆಲ್ಲಾ ಒಂದೊಂದು ಪಕ್ಷದಲ್ಲಿ ತಳ ಊರಿರುವುದರಿಂದ ಕಾಂಗ್ರೆಸ್ ಬಿಟ್ಟು ಬೇರೆ ಕಡೆ ಹೋದರೆ ರಮೇಶ್‍ಗೆ ಯಾವುದೇ ಉಳಿಗಾಲ ಇಲ್ಲ ಎನ್ನಲಾಗುತ್ತಿದೆ. ಅಲ್ಲದೇ ಪಕ್ಷದಲ್ಲಿ ಬೆಳಗಾವಿ ಭಾಗದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಭಲವಾಗುತ್ತಿದ್ದಾರೆ. ಜತೆಗೆ ಇವರ ಬೆಂಬಲಕ್ಕೆ ಸಚಿವ ಡಿ.ಕೆ.ಶಿವಕುಮಾರ್ ಕೂಡ ನಿಂತಿದ್ದು, ಒಂದೊಮ್ಮೆ ಈ ಸಂದರ್ಭ ರಾಜಕೀಯ ಅಸ್ಥಿರತೆ ನೆಪದಲ್ಲಿ ಕೈ ಬಿಟ್ಟರೆ ರಮೇಶ್‍ಗೆ ಕೂಡ ಉಳಿಗಾಲ ಇರಲ್ಲ ಎನ್ನಲಾಗುತ್ತಿದೆ.
ಒಟ್ಟಾರೆ ಮಂದಿನ ದಿನಗಳಲ್ಲಿ ಅತೃಪ್ತರ ನಿರ್ಧಾರ ಪ್ರಕಟವಾಗಲಿದ್ದು, ಯಾವ ನಿಲುವು ಕೈಗೊಳ್ಳುತ್ತಾರೆ, ಅದನ್ನು ಅವರು ಎಷ್ಟು ಯೋಚಿಸಿಕೊಂಡು ಮುಂದಡಿಯಿಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.