ಬೆಂಗಳೂರು: ಜೂ.18 ರಂದು ‘ಮಾಸ್ಕ್ ದಿನ’ ಆಚರಿಸುವ ಮೂಲಕ ಜನ ಜಾಗೃತಿ ಮೂಡಿಸುವಂತೆ ರಾಜ್ಯಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆ ಇಂದು ಬೆಳಗ್ಗೆ 7.30ಕ್ಕೆ ಮಾಸ್ಕ್ ದಿನಾಚರಣೆ ಪಾದಯಾತ್ರೆಗೆ ಸಿಎಂ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಿಎಂ, ಮಾಸ್ಕ್ ಧರಿಸುವುದದರಿಂದ ಕೊರೊನಾ ತಡೆಯಬಹುದು. ವಿಶ್ವ ಆರೋಗ್ಯ ಸಂಸ್ಥೆಯೇ ಇದನ್ನು ದೃಢಪಡಿಸಿದೆ. ಮಾಸ್ಕ್ ಧರಿಸುವುದು ನಮ್ಮ ಬದುಕಿನ ಭಾಗವಾಗಬೇಕು. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಎಲ್ಲ ಕ್ರಮ ತೆಗೆದುಕೊಂಡಿದೆ. ನಮ್ಮ ಕ್ರಮಗಳ ಬಗ್ಗೆ ನಿನ್ನೆ ಪ್ರಧಾನಿಗಳು ಶ್ಲಾಘಿಸಿದ್ದಾರೆ ಎಂದ ಅವರು, ಹೊರರಾಜ್ಯದಿಂದ ಜನರು ಬರದಿದ್ದರೆ ಕೊರೊನಾ ಹೆಚ್ಚಾಗುತ್ತಿರಲಿಲ್ಲ ಎಂದರು.
ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದೇವೆ. ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಇವರೆಲ್ಲರ ಶ್ರಮದಿಂದ ಕೊರೊನಾ ನಿಯಂತ್ರಣ ಸಾಧ್ಯವಾಗಿದೆ ಎಂದು ಕೊರೊನಾ ವಾರಿಯರ್ಸ್ಗಳನ್ನು ಹೊಗಳಿದರು.
ಬರುವ ದಿನಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಹೊರ ರಾಜ್ಯಗಳಿಂದ ಬರುವುದನ್ನು ತಡೆದಿದ್ದರೆ ರಾಜ್ಯದಲ್ಲಿ ಈಗಾಗಲೇ ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತಿತ್ತು. ಈಗಲೂ ಕಾಲ ಮಿಂಚಿಲ್ಲ. ನಾನು ಎಲ್ಲರ ಸಹಕಾರ ಕೋರುತ್ತೇನೆ ಎಂದು ಮನವಿ ಮಾಡಿದರು.
ಪಾದಯಾತ್ರೆ ಆರಂಭ
ಮಾಸ್ಕ್ ಡೇ ಹಿನ್ನೆಲೆ ಅಂಬೇಡ್ಕರ್ ವೀದಿ, ಕಬ್ಬನ್ ಪಾರ್ಕ್ ಬಳಿ ಸಿಎಂ ಪಾದಯಾತ್ರೆ ನಡಿಸಿದರು. ಇದಕ್ಕೆ ಸಂಪುಟ ಸಚಿವರು, ಕ್ರೀಡೆ, ಸಿನಿಮಾ ಗಣ್ಯರು ಸಾಥ್ ನೀಡಿದ್ದು, ವಿಶೇಷವಾಗಿತ್ತು.