ಬೆಂಗಳೂರು: ಐಎಂಎ ಜುವೆಲ್ಲರ್ಸ್ ವಂಚನೆ ಪ್ರಕರಣ ಸಂಬಂಧ ಲಂಚ ಪಡೆದ ಆರೋಪದಡಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ. ವಿಜಯಶಂಕರ್ ವಿರುದ್ಧ ಎಸ್‌ಐಟಿ ದಾಖಲಿಸಿರುವ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಗುರುವಾರ ಹೈಕೋರ್ಟ್ ವಿಚಾರಣೆ ನಡೆಸಿ ಕೇಂದ್ರ, ರಾಜ್ಯ ಸರ್ಕಾರ, ಸಿಬಿಐ, ಎಸ್‌ಐಟಿ ಸೇರಿ ಎಲ್ಲ ಪ್ರತಿವಾದಿಗಳಿಗೂ ನೋಟಿಸ್ ಜಾರಿಗೊಳಿಸಿದೆ.
ಹೈಕೋರ್ಟ್‌ನಲ್ಲಿ ಗುರುವಾರ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕರಣದ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಾದಿಸಿದ ವಕೀಲರು, ಐಎಂಎ ಪ್ರಕರಣದಲ್ಲಿ ಆರೋಪಿ ವಿರುದ್ಧ ದಾಖಲಾಗಿರುವ ಎಫ್ಐಆರ್ ವಜಾಗೊಳಿಸಬೇಕು. ಅಧೀನ ನ್ಯಾಯಾಲಯದಲ್ಲಿ ನಡೆಯುವ ಪ್ರಕರಣದ ವಿಚಾರಣೆ ರದ್ದು ಮಾಡಬೇಕು. ಐಎಂಎ ಸಂಸ್ಥೆ ವಂಚನೆ ಪ್ರಕರಣದ ತನಿಖೆಯನ್ನು ಎಸ್‌ಐಟಿ ಬದಲಿಗೆ ಸಿಬಿಐಗೆ ವಹಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ಸರ್ಕಾರದ ಪರ ವಾದಿಸಿದ ಅಡ್ವೋಕೇಟ್ ಜನರಲ್ ಉದಯ ಹೊಳ್ಳ, ಐಎಂಎ ಸಂಸ್ಥೆ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಕೋರಿ ಈಗಾಗಲೇ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಅವರ ನೇತತ್ವದ ವಿಭಾಗೀಯ ಪೀಠದಲ್ಲಿ ಮೂರು ಅರ್ಜಿಗಳು ಬಂದಿವೆ. ಹೀಗಾಗಿ, ಈ ಅರ್ಜಿಯನ್ನು ಅಲ್ಲಿಗೆ ವರ್ಗಾಯಿಸಬಹುದೆಂದು ಪೀಠಕ್ಕೆ ತಿಳಿಸಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು, ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಅವರ ವಿಭಾಗೀಯ ಪೀಠದೆದುರು ಈ ಅರ್ಜಿಯನ್ನು ವರ್ಗಾಯಿಸುವ ಕುರಿತು ಮನವಿ ಮಾಡಿಕೊಳ್ಳಲು ಸರ್ಕಾರ, ಅರ್ಜಿದಾರರಿಗೆ ಒಂದು ವಾರದ ಕಾಲಾವಕಾಶ ನೀಡಿತು. ಅಲ್ಲದೆೇ, ಕೇಂದ್ರ, ರಾಜ್ಯ ಸರ್ಕಾರ ಸೇರಿ ಎಲ್ಲ ಪ್ರತಿವಾದಿಗಳಿಗೂ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿತು.