ಬೆಂಗಳೂರು: ಗಣಿಗಾರಿಕೆ ಅಕ್ರಮಗಳ ತನಿಖೆಗೆ ಲೋಕಾಯುಕ್ತದಲ್ಲಿ ರಚನೆ ಮಾಡಿರುವ ಎಸ್‌ಐಟಿ ಅವಧಿಯನ್ನು 2024ರ ಜೂನ್ 30ರ ತನಕ ವಿಸ್ತರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಐದು ವರ್ಷಗಳಲ್ಲಿ ಅಕ್ರಮ ಗಣಿಗಾರಿಕೆ ಸಂಬಂಧಿತ 171 ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆ ಆಗಿಲ್ಲ. 10 ಕ್ರಿಮಿನಲ್ ಕೇಸ್ನಲ್ಲಿ ತನಿಖೆ ಬಾಕಿ ಇದೆ. ಅದಿರು ಮೌಲ್ಯ ಮಾಪನ ವರದಿ ಕೂಡ ಬಂದಿಲ್ಲ. ದೋಷಾರೋಪ ಪಟ್ಟಿ ಕೂಡ ಬಂದಿಲ್ಲ. 59 ಪ್ರಕರಣಗಳಲ್ಲಿ ಮಾಹಿತಿನೇ ಕೊಟ್ಟಿಲ್ಲ. ಈ ವಿಳಂಬದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿ ಅದರ ಕಾರ್ಯಾವಧಿಯನ್ನು ಎಂಟು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ. ಈ ಅವಧಿಯಲ್ಲಿ ಮುಂದೆ ಈ ಅಕ್ರಮ ಗಣಿಗಾರಿಕೆ ಪ್ರಕರಣಗಳ ಬಗ್ಗೆ ಏನು ಮಾಡಬಹುದು ಎಂಬ ಬಗ್ಗೆ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಈ ಹಿಂದೆ 50 ಸಾವಿರ ಮೆಟ್ರಿಕ್ ಟನ್ ಗಿಂತ ಕಡಿಮೆ ಅಕ್ರಮ ಗಣಿಗಾರಿಕೆ ನಡೆಸಿದ ಪ್ರಕರಣಗಳ ತನಿಖೆಗಾಗಿ ಲೋಕಾಯುಕ್ತದಲ್ಲಿ ಎಸ್‌ಐಟಿ ರಚನೆ ಮಾಡಿತ್ತು. ಇದರಲ್ಲಿ ಮಾಜಿ ಸಿಎಂ ಹೆಚ್ಡಿಕೆ ಅವರ ಮೇಲಿನ 2007ರಲ್ಲಿ ಜಂತಕಲ್ ಮೈನಿಂಗ್ ಕಂಪನಿಯ ಗಣಿಗಾರಿಕೆ ಲೈಸೆನ್ಸ್ ಅನ್ನು ಅಕ್ರಮವಾಗಿ ನವೀಕರಣ ಮಾಡಿದ ಆರೋಪ ಪ್ರಕರಣ, ಮಾಜಿ ಸಿಎಂ ಧರಂ ಸಿಂಗ್ ವಿರುದ್ಧದ ಪ್ರಕರಣ, ಸೇರಿದಂತೆ ಹಲವು ರಾಜಕಾರಣಿಗಳು ಹಾಗೂ ಸುಮಾರು 15 ಐಎಎಸ್ ಅಧಿಕಾರಿಗಳ ವಿರುದ್ಧದ ಪ್ರಕರಣಗಳು ಒಳಗೊಂಡಿವೆ. ಇದೀಗ ಸಚಿವ ಸಂಪುಟ ಸಭೆ ಎಸ್‌ಐಟಿ ಕಾರ್ಯಾವಧಿ ವಿಸ್ತರಿಸಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಬರ ಪರಿಹಾರ ವಿಳಂಬ ಬಗ್ಗೆ ಕಳವಳ: ಇಂದಿನ ಸಚಿವ ಸಂಪುಟ ಸಭೆಯಲ್ಲೂ ಬರ ಪರಿಹಾರ ಸಂಬಂಧ ಚರ್ಚೆ ನಡೆದಿದ್ದು, ಕೇಂದ್ರ ಸರ್ಕಾರ ಇನ್ನೂ ಯಾವುದೇ ಅನುದಾನ ನೀಡದಿರುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಕಳವಳ ವ್ಯಕ್ತಪಡಿಸಲಾಯಿತು. ಈ ಬಗ್ಗೆ ಮತ್ತೆ ಸಂಪುಟ ಸಭೆಯಲ್ಲಿ ಗಂಭೀರವಾಗಿ ಕಳವಳ ವ್ಯಕ್ತಪಡಿಸಲಾಗಿದೆ. ಬರದಿಂದ 46 ಲಕ್ಷ ಹೆಕ್ಟೇರ್ ನಷ್ಟವಾಗಿದೆ. ಈವರೆಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಕೇಂದ್ರ ಸರ್ಕಾರ ಸ್ಪಂದಿಸದೇ ಹೋದರೆ ಮುಂದಿನ ದಿನಗಳಲ್ಲಿ ಒಂದು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಚಿವರು ತಿಳಿಸಿದರು.
ಸಂಪುಟ ಸಭೆಯ ಇತರೆ ತೀರ್ಮಾನಗಳೇನು?
- ಆಹಾರ ಇಲಾಖೆಯ ಎಲ್ಲ ಸಗಟು ಗೋದಾಮುಗಳಲ್ಲಿ 12.64 ಕೋಟಿ ರೂ.ಗಳ ವೆಚ್ಚದಲ್ಲಿ ಸಿಸಿಟಿವಿ ಅಳವಡಿಕೆ.
- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 44 ಕೋಟಿ ರೂ. ವೆಚ್ಚವನ್ನು ಎಚ್ ಪಿಎ ವ್ಯಾಪ್ತಿಯ ಶ್ರೀರಂಗಪಟ್ಟಣ ಮತ್ತು ನಂಜನಗೂಡು ತಾಲೂಕುಗಳ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿ ಹಾಗೂ ತ್ಯಾಜ್ಯ ನೀರು ಸಂಸ್ಕರಣ ಘಟಕ ಸ್ಥಾಪನೆಗೆ ಭೂ ಸ್ವಾಧೀನಕ್ಕೆ ಅಭಿವೃದ್ಧಿ ನಿಧಿ -1 ರಲ್ಲಿ ಅನುದಾನ ಭರಿಸಲು ಅನುಮತಿ
- ಗದಗ - ಬೆಟಗೇರಿ ನಗರಗಳಿಗೆ ಅಮೃತ 2.0 ಯೋಜನೆಯಲ್ಲಿ ಕುಡಿಯುವ ನೀರು ಸರಬರಾಜಿಗೆ ಜಲಮೂಲ ಅಭಿವೃದ್ಧಿ, ಪುನಶ್ಚೇತನಕ್ಕಾಗಿ 34 ಕೋಟಿ ರೂ. ಒದಗಿಸಲು ಒಪ್ಪಿಗೆ.
- ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ ವಿಧೇಯಕಕ್ಕೆ ಒಪ್ಪಿಗೆ. 800-1000 ಕೋಟಿ ಮೌಲ್ಯದ 34.32 ಎಕರೆ ಜಮೀನನಲ್ಲಿ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ, ವಾಣಿಜ್ಯ, ಸಂಸ್ಕೃತಿ ಹಾಗೂ ಪ್ರದರ್ಶನ ಕೇಂದ್ರ ನಿರ್ಮಿಸಲು ಪ್ರಾಧಿಕಾರ ರಚನೆಗೆ ತೀರ್ಮಾನ. ಈ ಭೂಮಿಯನ್ನು ಪೌರಾಡಳಿತದಿಂದ ಆ ಭೂಮಿಯನ್ನು ಸರ್ಕಾರಕ್ಕೆ ವರ್ಗಾಯಿಸಲಾಗಿದೆ.
- ಒಂದು ಲಕ್ಷದೊಳಗೆ ಜನಸಂಖ್ಯೆ ಇರುವ 17 ಆದ್ಯತೆ ನಗರಗಳಲ್ಲಿ 750 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ನಿರ್ಮಾಣ ಹಾಗೂ ದುರಸ್ಥಿಗೆ ಆಡಳಿತಾತ್ಮಕ ಒಪ್ಪಿಗೆ.
- ಬಿಡಿಎಯ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ 8ನೇ ಬ್ಲಾಕ್ ನಲ್ಲಿ 'ಜಿ' ಪ್ರವರ್ಗದಲ್ಲಿ ನಿವೇಶನ ಪಡೆದಿದ್ದ ಶಾಸಕ ಶ್ರೀಕಾಂತ್ ಸುಬ್ಬರಾವ್ ಕುಲಕರ್ಣಿ ಅವರಿಗೆ ನಿವೇಶನ ಮಾರಾಟಕ್ಕೆ ಅನುಮತಿ ನೀಡಿದೆ.
- ದೈಹಿಕ ಅಂಗವಿಕಲರಿಗೆ 36 ಕೋಟಿ ರೂ.ಗಳ ವೆಚ್ಚದಲ್ಲಿ ಹೆಚ್ಚುವರಿ 4 ಸಾವಿರ ಯಂತ್ರಚಾಲಿತ ದ್ವಿಚಕ್ರ ವಾಹನಗಳ ಸರಬರಾಜು ಟೆಂಡರ್ ಕರೆಯಲು ಅನುಮತಿ.
- ಬಿಳಿ ಜೋಳ, ಇತರ ದಾನ್ಯಗಳನ್ನು ಖರೀದಿಸಿ, ಸಂಗ್ರಹಿಸಿ 80 ಲಕ್ಷ ಗೋಣಿ ಚೀಲವನ್ನು ಹಂತ ಹಂತವಾಗಿ ಖರೀದಿಸಲು 76 ಕೋಟಿ ಅನುದಾನ ಮಿತಿ ಗೊಳಿಸಿ ಅನುಮೋದನೆ.
- ಬಿಬಿಎಂಪಿ ಹೊರತು ಪಡಿಸಿ ಸ್ಥಳೀಯ ನಗರ ಸಂಸ್ಥೆಗಳಲ್ಲಿ ಇಂದಿರಾ ಕ್ಯಾಂಟೀನ್ ಕಾಮಗಾರಿ ಮಾಡಲು 4ಜಿ ಯಡಿ ವಿನಾಯಿತಿ ನೀಡಲು ತೀರ್ಮಾನ. 188 ಹೊಸ ಇಂದಿರಾ ಕ್ಯಾಂಟೀನ್ ಗಳ ನಿರ್ಮಾಣಕ್ಕಾಗಿ 154 ಕೋಟಿ ರೂ. ವೆಚ್ಚಕ್ಕೆ ಒಪ್ಪಿಗೆ.
ಇದನ್ನೂ ಓದಿ: ರಾಜ್ಯದಲ್ಲಿ ಬರದ ಛಾಯೆ: ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ಆರ್ಥಿಕ ಇಲಾಖೆ ಸಲಹೆ