ಬೆಂಗಳೂರು: ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಕೈಗಾರಿಕಾ ವಲಯಕ್ಕೆ ನಿರಾಸೆಯಾಗಿದೆ. ಬೇಡಿಕೆಯಿಟ್ಟದ್ದ ಹಲವಾರು ಮಹತ್ವದ ಯೋಜನೆಗಳಿಗೆ ಸರ್ಕಾರ ಸೊಪ್ಪು ಹಾಕದೆ, ಕೈಗಾರಿಕಾ ವಲಯವನ್ನು ನಿರ್ಲಕ್ಷ್ಯ ಮಾಡಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ಅಧ್ಯಕ್ಷ ಸಿ.ಆರ್.ಜನಾರ್ಧನ್ ಹೇಳಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೈಗಾರಿಕೆಗೆ ಬೇಕಾದ ಸೌಲಭ್ಯಗಳು ಈ ಬಜೆಟ್ನಲ್ಲಿ ಸಿಗಲಿಲ್ಲ. ಆದರೂ ಹಳೆಯ ಒಂಭತ್ತು ಕ್ಲಸ್ಟರ್ ಜೊತೆ ಇನ್ನೂ ಒಂದು ಕ್ಲಸ್ಟರ್ ಪ್ರಾರಂಭಿಸಲು (ಹಾರೋಹಳ್ಳಿ ಎಲೆಕ್ಟ್ರಿಕಲ್ ವೆಹಿಕಲ್ ಕ್ಲಸ್ಟರ್) ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ಕೈಗಾರಿಕಾ ವಲಯ ಚೇತರಿಸಿಕೊಂಡು ಕಾಂಪಿಟ್ ವಿಥ್ ಚೈನಾಕ್ಕೆ ಬೆಂಬಲ ಸಿಗಲಿದೆ. ಕೈಗಾರಿಕೋದ್ಯಮಗಳ ನಿಯಮ ಮುಂದಿನ ತಿಂಗಳಲ್ಲಿ ಜಾರಿಗೆ ಬರಲಿದ್ದು, ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಜಿಎಸ್ ಟಿಯ ರಾಜ್ಯದ ತೆರಿಗೆ ಪಾಲು, ಹಾಗೂ ಜಿಎಸ್ ಟಿ ಪರಿಹಾರ ಹಣದಲ್ಲಿ ರಾಜ್ಯಕ್ಕೆ 11,887 ಕೋಟಿ ರೂಪಾಯಿ ನಷ್ಟವಾಗಿರೋದ್ರಿಂದ ಹೆಚ್ಚಿನ ಹೊಸ ಯೋಜನೆಗಳನ್ನು ಘೋಷಿಸಲು ಸಿಎಂಗೆ ತೊಂದರೆಯಾಗಿರಬಹುದು ಎಂದೂ ಜನಾರ್ಧನ್ ಹೇಳಿದರು.
ಕೇವಲ ಶೇ 40 ರಷ್ಟು ಮಾತ್ರ ಕೈಗಾರಿಕೆಗಳು ಕೆಲಸ ಮಾಡ್ತಿವೆ. ಹೀಗಿರುವಾಗ ಬಜೆಟ್ ಗಳು ದಿಕ್ಸೂಚಿಯಾಗಬೇಕು. ಆದ್ರೆ ರಾಜ್ಯ ಸರ್ಕಾರದ ಬಜೆಟ್ ಉದ್ಯೋಗ ಸೃಷ್ಟಿಯಲ್ಲಿ, ಉತ್ಪಾದನೆ ಹೆಚ್ಚಳಕ್ಕೆ ನಿರಾಶಾದಾಯಕವಾಗಿದೆ ಎಂದು ಕಾಸಿಯಾ ಮಾಜಿ ಅಧ್ಯಕ್ಷ ಎಮ್.ಜಿ. ಪ್ರಭಾಕರ್ ಅಭಿಪ್ರಾಯಪಟ್ಟರು.