ಬೆಂಗಳೂರು: ಬೆಳಗಾವಿ ಮಹಿಳೆ ವಿವಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿದ್ದರೂ ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ.
ತುಮಕೂರು ರಸ್ತೆಯ ಮಾದಾವರದ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ ಬಳಿ ಮಾತನಾಡಿದ ಅವರು, ಗೃಹ ಸಚಿವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು, ಜಿಲ್ಲಾ ಮಂತ್ರಿಗಳು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಆದರೂ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಈ ಕೃತ್ಯದ ಹಿಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ರಾಜ್ಯದ ಮಹಿಳೆಯರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದುವರೆದು, ಕಾನ್ಫಿಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಸಂಸ್ಥೆಯು ಕಳೆದ 23 ವರ್ಷಗಳಿಂದ ಕಟ್ಟಡ ನಿರ್ಮಾಣ ಭಾರಿ ಉಪಕರಣಗಳು, ಭಾರಿ ವಾಹನಗಳು ಅತ್ಯಾಧುನಿಕ ತಂತ್ರಜ್ಞಾನದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ವಸ್ತುಪ್ರದರ್ಶನ ಹಾಗೂ ಮೇಳವನ್ನು ಆಯೋಜಿಸಿಕೊಂಡು ಬಂದಿದೆ. ಈ ಮೇಳದಲ್ಲಿ ನೂತನ ತಂತ್ರಜ್ಞಾನಗಳನ್ನು ಪರಿಚಯಿಸಿದ್ದಾರೆ. ಇಲ್ಲಿ ನನಗೆ ಕಂಡ ಮಹತ್ತರ ಬದಲಾವಣೆ ಎಂದರೆ ಅದು ಡಿಸೇಲ್ ಯಂತ್ರೋಪಕರಣಗಳಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ಯಂತ್ರಗಳನ್ನು ರೂಪಿಸಿದ್ದಾರೆ. ಇನ್ನು, ಇಲ್ಲಿರುವ ಅನೇಕ ಯಂತ್ರೋಪಕರಣಗಳು ಭಾರತ ಹಾಗೂ ನಮ್ಮ ರಾಜ್ಯದಲ್ಲೇ ತಯಾರಾಗಿವೆ. ಈ ಯಂತ್ರಗಳು ವಿದೇಶಗಳಿಗೂ ರಫ್ತಾಗುತ್ತಿವೆ ಎಂದರು.
ಈ ವಸ್ತು ಪ್ರದರ್ಶನದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಭಾಗವಹಿಸಲು ಅವಕಾಶ ನೀಡಬೇಕು ಎಂದು ಇದರ ಆಯೋಜಕರಿಗೆ ಸಲಹೆ ನೀಡಲು ಬಯಸುತ್ತೇನೆ. ನಮ್ಮ ವಿದ್ಯಾರ್ಥಿಗಳು ನೂತನ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಪಡೆಯಬೇಕು. ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ನಮ್ಮ ರಾಜ್ಯ ಹೆಸರುವಾಸಿ. ಹೀಗಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇಂತಹ ವಸ್ತು ಪ್ರದರ್ಶನದಲ್ಲಿ ಭಾಗವಹಿಸಬೇಕು. ಸಮಯ ಉಳಿಕೆ, ಸುರಕ್ಷತೆ, ಮಾಲಿನ್ಯ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ವಸ್ತು ಪ್ರದರ್ಶನದಲ್ಲಿ ಹೈಡ್ರೋಜನ್ ಮೂಲಕ ಜೆಸಿಬಿ ಚಾಲನೆ ಮಾಡುತ್ತಿರುವುದನ್ನು ನೋಡಿದೆ ಎಂದು ತಿಳಿಸಿದರು.
ಈ ನೂತನ ತಂತ್ರಜ್ಞಾನಗಳು ನಮ್ಮ ಬೃಹತ್ ಯೋಜನೆಗಳ ಸಮಯವನ್ನು ಉಳಿಸುತ್ತವೆ. ಈ ತಂತ್ರಜ್ಞಾನ ಯಂತ್ರೋಪಕರಣಗಳಿಂದ ಐದು ವರ್ಷ ಮಾಡುವ ಬ್ರಿಡ್ಜ್ಗಳನ್ನು ಒಂದೆರಡು ವರ್ಷಗಳಲ್ಲಿ ಪೂರ್ಣಗೊಳಿಸಬಹುದು. ಇವರಿಗೆ ಉತ್ತೇಜನ ನೀಡಬೇಕು ಎಂದು ನಾನು ಈ ವಸ್ತು ಪ್ರದರ್ಶನಕ್ಕೆ ಆಗಮಿಸಿದ್ದೇನೆ ಎಂದು ಡಿಕೆಶಿ ಹೇಳಿದರು.
ಇದನ್ನೂ ಓದಿ: ಜಾತಿ ಗಣತಿ ವಿವಾದ ಬಗ್ಗೆ ಸಿಎಂ ಭೇಟಿ : ವೀರಶೈವ - ಲಿಂಗಾಯತ ಶಾಸಕರಿಂದ ಹೊಸ ಸಮೀಕ್ಷೆಗೆ ಪಟ್ಟು