ಬೆಂಗಳೂರು : ತಮ್ಮ ಅನುಮತಿ ಇಲ್ಲದೆ ಯಾವುದೇ ತನಿಖಾ ಸಂಸ್ಥೆಗಳ ಎದುರು ಹಾಜರಾಗಬಾರದು, ಮಾಹಿತಿ ನೀಡಬಾರದು ಹಾಗೂ ದಾಖಲೆಗಳನ್ನು ಒದಗಿಸಬಾರದು ಎಂದು ಬಿಡಿಎ ಆಯುಕ್ತರು ಹೊರಡಿಸಿದ್ದ ಆದೇಶವನ್ನು ಹಿಂಪಡೆದಿರುವುದಾಗಿ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ಬಿಡಿಎ ಆಯುಕ್ತರ ಕ್ರಮ ಪ್ರಶ್ನಿಸಿ ಎಸ್. ಅರುಣಾಚಲಂ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಬಿಡಿಎ ಪರ ವಕೀಲರು ಪೀಠಕ್ಕೆ ಮೆಮೋ ಸಲ್ಲಿಸಿ, ಆಯುಕ್ತರು ಈ ಹಿಂದೆ ಹೊರಡಿಸಿದ್ದ ಆದೇಶ ಹಿಂಪಡೆದಿದ್ದಾರೆ ಎಂದು ವಿವರಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ ಅರ್ಜಿ ಇತ್ಯರ್ಥಪಡಿಸಿ ಆದೇಶಿಸಿತು.
ಪ್ರಕರಣದ ಹಿನ್ನೆಲೆ : ಬಿಡಿಎ ಆಯುಕ್ತರು ಜುಲೈ 8ರಂದು ಆದೇಶ ಹೊರಡಿಸಿ, ತಮ್ಮ ಅನುಮತಿ ಇಲ್ಲದೆ ಯಾವುದೇ ತನಿಖಾ ಸಂಸ್ಥೆಗೆ ಮಾಹಿತಿ ಹಾಗೂ ದಾಖಲೆ ನೀಡಬಾರದು, ವಿಚಾರಣೆಗೆ ಹಾಜರಾಗಬಾರದು ಎಂದು ಸಿಬ್ಬಂದಿಗೆ ತಾಕೀತು ಮಾಡಿದ್ದರು. ಆಯುಕ್ತರು ಹೀಗೆ ತಮ್ಮ ವ್ಯಾಪ್ತಿ ಮೀರಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.
ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ, ವಿಚಾರಣೆಗೆ ಹಾಜರಾಗದ ಅಧಿಕಾರಿಗೆ ಛೀಮಾರಿ ಹಾಕಿತ್ತು. ಹಾಜರಾಗದೆ ಇರುವುದಕ್ಕೆ ವಿವರಣೆ ನೀಡಿ ವೈಯಕ್ತಿಕವಾಗಿ ಪ್ರಮಾಣ ಪತ್ರ ಸಲ್ಲಿಸುವಂತೆ ತಾಕೀತು ಮಾಡಿತ್ತು. ಆ ಬಳಿಕ ಬಿಡಿಎ ಪರ ವಕೀಲರು ಹಾಜರಾಗಿ ಆಯುಕ್ತರ ಕ್ರಮ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದರು.
ವಾದ ತಿರಸ್ಕರಿಸಿದ್ದ ಪೀಠ, ಎಸಿಬಿ, ಬಿಎಂಟಿಎಫ್ ಸೇರಿದಂತೆ ತನಿಖಾ ಸಂಸ್ಥೆಗಳ ಕಾರ್ಯಕ್ಕೆ ಈ ಆದೇಶ ಅಡ್ಡಿಯಾಗಿದೆ. ಇಂತಹ ವಿಚಾರ ನೋಡಿಯೂ ಸರ್ಕಾರ ಸುಮ್ಮನೆ ಕೂರಬಾರದು. ತಮ್ಮ ವ್ಯಾಪ್ತಿ ಮೀರಿ ಆದೇಶ ಹೊರಡಿಸಿರುವ ಆಯುಕ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಇರುವ ಸಾಧ್ಯತೆಗಳ ಕುರಿತು ಸರ್ಕಾರ ಪರಿಶೀಲಿಸಬೇಕು ಎಂದು ನಿರ್ದೇಶಿಸಿತ್ತು. ಅಂತಿಮವಾಗಿ ತಮ್ಮ ತಪ್ಪಿನ ಅರಿವಾದ ಬಿಡಿಎ ಆಯುಕ್ತರು ಇಂದು ಆದೇಶ ಹಿಂಪಡೆದಿರುವುದಾಗಿ ಹೈಕೋರ್ಟ್‌ಗೆ ಲಿಖಿತವಾಗಿ ತಿಳಿಸಿದ್ದಾರೆ.