ಬೆಂಗಳೂರು: ನಗರದಲ್ಲಿ ದೊಡ್ಡ ದೊಡ್ಡ ಬಿಲ್ಡಿಂಗ್ ಕಟ್ಟೋ ಮಂದಿ ಪಾಲಿಕೆಗೆ ಮಾತ್ರ ಕೋಟಿ ಕೋಟಿ ರೂಪಾಯಿ ಆಸ್ತಿ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿದ್ದಾರೆ. ಇದ್ರಲ್ಲಿ ಕೇವಲ ಖಾಸಗಿಯವರಲ್ಲ. ಸ್ವತಃ ಸರ್ಕಾರಿ ಸಂಸ್ಥೆಗಳೂ ಸೇರಿಕೊಂಡಿವೆ. ಇಂತಹ ಮೂರು ಕಟ್ಟಡಗಳ ಮೇಲೆ ಇಂದು ಪಾಲಿಕೆ ಕಂದಾಯ ಅಧಿಕಾರಿಗಳು ದಾಳಿ ನಡೆಸಿದ್ದು, ನೋಟಿಸ್ ಅಂಟಿಸಿ ಬೀಗಮುದ್ರೆ ಹಾಕಿದ್ದಾರೆ.
ಕೊಡಿಗೇನಹಳ್ಳಿ ಕಂದಾಯ ಉಪ ವಿಭಾಗದಲ್ಲಿ ಬ್ರಿಗೇಡ್ ಒಪಸ್ ಕಮರ್ಷಿಯಲ್ ಬಿಲ್ಡಿಂಗ್, ಸಲಾರ್ ಪುರಿಯಾ ಗಲೇರಿಯಾ ಹಾಗೂ ಹೆಬ್ಬಾಳದಲ್ಲಿರುವ ಬಿಎಂಟಿಸಿ ಬಸ್ ಡಿಪೋ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬ್ರಿಗೇಡ್ ಒಪಸ್ ಕಮರ್ಷಿಯಲ್ ಬಿಲ್ಡಿಂಗ್ನವರು ಕಳೆದ 2 ವರ್ಷದಿಂದ 6.21 ಕೋಟಿ ರೂಪಾಯಿ ಆಸ್ತಿ ತೆರಿಗೆಯನ್ನು ಕಟ್ಟಿರಲಿಲ್ಲ. ಹಣ ಕಟ್ಟಿ ಅಂತ ನೋಟಿಸ್ ಕೊಟ್ರು ಕೇರ್ ಮಾಡಿರಲಿಲ್ಲ. ಹೀಗಾಗಿ ಕಂದಾಯ ಅಧಿಕಾರಿ ಕೆಂಪರಂಗಯ್ಯ ನೇತೃತ್ವದಲ್ಲಿ ಪಾಲಿಕೆ ಸಿಬ್ಬಂದಿ ಮುಲಾಜಿಲ್ಲದೆ ಕಟ್ಟಡದ ಪ್ರವೇಶ ದ್ವಾರಕ್ಕೆ ನೋಟಿಸ್ ಹಾಕಿ ಗೇಟಿಗೆ ಬೀಗಮುದ್ರೆ ಹಾಕಿದ್ದಾರೆ.
ಸಲಾರ್ ಪುರಿಯಾ ಗಲೇರಿಯಾದಿಂದ 1.12 ಕೋಟಿ ರೂಪಾಯಿ ಬಾಕಿ ಇರುವ ಕಾರಣ, ಆ ಕಮರ್ಷಿಯಲ್ ಬಿಲ್ಡಿಂಗ್ ಗೇಟಿಗೂ ಬೀಗ ಹಾಕಿ ಸೀಲ್ ಮಾಡಲಾಗಿದೆ. ಸರ್ಕಾರದ ಸ್ವಾಯತ್ತ ಸಂಸ್ಥೆ ಬಿಎಂಟಿಸಿ ಡಿಪೋ ಕಳೆದ 4 ವರ್ಷದಿಂದ 12 ಲಕ್ಷ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿತ್ತು. ಹೀಗಾಗಿ ಬಸ್ ಡಿಪೋ ಗೇಟಿಗೂ ಬೀಗಮುದ್ರೆ ಹಾಕಲು ಮುಂದಾದಾಗ, ಡಿಪೋ ಅಧಿಕಾರಿಗಳ ಮನವಿ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಕೇವಲ ಎಚ್ಚರಿಕೆ ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟಾರೆ ವಿವಿಧ ಆಸ್ತಿ ಮಾಲೀಕರಿಂದ ಬರೋಬ್ಬರಿ 2,322 ಕೋಟಿ ರೂಪಾಯಿ ಪ್ರಾಪರ್ಟಿ ಟ್ಯಾಕ್ಸ್ ಬಾಕಿ ಉಳಿದಿದೆ. ಬ್ಯಾಟರಾಯನಪುರ ಕಂದಾಯ ವಲಯದಲ್ಲಿ ಈ ವರ್ಷ ಒಟ್ಟು 135 ಕೋಟಿ ರೂಪಾಯಿ ಬಾಕಿ ಇದ್ದು, ಕೇವಲ 107 ಕೋಟಿ ರೂಪಾಯಿ ವಸೂಲಿಯಾಗಿದೆ. ಇದು ಕೇವಲ ಸ್ಯಾಂಪಲ್ ಅಷ್ಟೆ. ಬಾಕಿ ಆಸ್ತಿ ತೆರಿಗೆ ವಸೂಲಾತಿ ಅಭಿಯಾನದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಟ್ಟಡಗಳ ಮೇಲೆ ದಾಳಿ ನಡೆಯಲಿದೆ ಎಂದು ತಿಳಿದುಬಂದಿದೆ.