ಬೆಂಗಳೂರು: ಮಂಗಳೂರಿನ ಬಾಂಬ್ ಬ್ಲಾಸ್ಟ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಗುರವಾಗಿ ಮಾತನಾಡಿದ್ದಾರೆ. ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಡಿ ಕೆ ಶಿವಕುಮಾರ್ಗೆ ಭಯೋತ್ಪಾದಕರು ಬ್ರದರ್ಸ್ ತರ ಕಾಣುತ್ತಾರೆ. ಬಾಂಬ್ ಬ್ಲಾಸ್ಟ್ ಮಾಡಿದ ಶಾರೀಕ್ ನನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ.
ಕಾಂಗ್ರೆಸ್ನ ನಿಲುವು ದಿನದಿಂದ ದಿನಕ್ಕೆ ಯಾವ ರೀತಿ ಬದಲಾಗುತ್ತಿದೆ ಎಂದು ಅವರ ಮಾತಿನಿಂದಲೇ ಗೊತ್ತಾಗುತ್ತಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ. ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಕೆಜೆ ಹಳ್ಳಿ, ಡಿಜೆಹಳ್ಳಿಯ ಭಯೋತ್ಪಾದಕರನ್ನು ಬ್ರದರ್ಸ್ ಅಂತಾ ಸಮರ್ಥನೆ ಮಾಡಿಕೊಂಡಿದ್ದರು.
ನಿಜವಾಗಿಯೂ ಈ ನಿಲುವು ಹೇಡಿತನದ್ದು, ಭಯೋತ್ಪಾದನೆಗೆ ಪ್ರಚೋದನೆ ಕೊಡುತ್ತಿರುವುದನ್ನು ನಾವು ಎಲ್ಲ ಸಂದರ್ಭದಲ್ಲಿ ನೋಡಿದ್ದೇವೆ. ಇದರಿಂದಲೇ ಗೊತ್ತಾಗ್ತಿದೆ ಕಾಂಗ್ರೆಸ್ ದಿವಾಳಿಯಾಗಿದೆ ಎಂದು. ಮುಸ್ಲಿಂರ ತುಷ್ಟೀಕರಣ, ವೋಟ್ ಬ್ಯಾಂಕ್ಗಾಗಿ ಸಮರ್ಥನೆ ಮಾಡಿಕೊಳ್ಳುವುದು ದೇಶಕ್ಕೆ ದೊಡ್ಡ ಅಪಾಯ. ಭಯೋತ್ಪಾದನೆಗೆ ಜಾತಿ ಇಲ್ಲ, ಇದನ್ನು ಯಾರೇ ಆಗಲಿ ಖಂಡಿಸಬೇಕು.
ಕಾಂಗ್ರೆಸ್ ನ ತುಷ್ಟಿಕಾರಣದಿಂದಲೇ ಪಿಎಫ್ಐ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವುದು. ಕಾಂಗ್ರೆಸ್ ಯಾವತ್ತಿಗೂ ದೇಶ ಮುಖ್ಯ ಅಂತಾ ಹೇಳಿಲ್ಲ. ಅವರು ಯಾವಾಗಲೂ ಮುಸ್ಲಿಮರೇ ಮುಖ್ಯ ಅಂತಾ ಹೇಳಿದ್ದಾರೆ. ಡಿಕೆಶಿ ಅವರ ನಿಲುವಿಗೆ ಮುಂದೆ ದೊಡ್ಡ ಬೆಲೆ ತರಬೇಕಾಗುತ್ತದೆ. ಶಾರೀಕ್ ಅಕೌಂಟ್ಗೆ ಎಲ್ಲಿಂದ ದುಡ್ಡು ಬರುತ್ತದೆ. ಅವನ ಹಿನ್ನೆಲೆ ತಿಳಿದೇ ಟೆರರ್ ಅಂತಾ ಪೊಲೀಸರು ಘೋಷಣೆ ಮಾಡಿದ್ದು ಎಂದರು.
ಈಗಾಗಲೇ ತನಿಖೆ ನಡೆಯುತ್ತಿದೆ: ವೋಟರ್ ಐಡಿ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಈಗಾಗಲೇ ಅದರ ಬಗ್ಗೆ ಸರ್ಕಾರ ಸೂಕ್ತ ಕ್ರಮ ವಹಿಸಿದೆ. ರಾಷ್ಟ್ರ ವಿರೋಧಿ ಚಟುವಟಿಕೆ ನಡೆದಾಗ ಯಾರೂ ವಿಷಯ ಡೈವರ್ಟ್ ಮಾಡಲ್ಲ. ಕಾಂಗ್ರೆಸ್ ನ ಇತಿಹಾಸದಲ್ಲಿ ಡೈವರ್ಟ್ ಮಾಡಿರುವ ಉದಾಹರಣೆಗಳು ಇವೆ. ದಲಿತ ಶಾಸಕನ ಮನೆಗೆ ಬೆಂಕಿ ಬಿದ್ದಾಗ ಅವನ ಬಗ್ಗೆ ಮಾತನಾಡಿಲ್ಲ, ಶಾರೀಕ್ ಮಂಗಳೂರಿನ ಗೋಡೆ ಬರಹದಲ್ಲಿ ಬರೆದಿದ್ದ ಇವನ ಬಗ್ಗೆ ಮಂಗಳೂರಿನ ಜನರಾದ ನಮಗೆ ಗೊತ್ತಿದೆ. ಇವತ್ತು ಕುಕ್ಕರ್ ಭಯೋತ್ಪಾದಕ ಶಾರಿಕ್ ನನ್ನ ಸಂಬಂಧಿ ಎಂಬಂತೆ ಸಮರ್ಥನೆ ಮಾಡಿಕೊಳ್ತಾರೆ ಎಂದರೆ ಇದಕ್ಕಿಂತ ಹೇಡಿತನ ಬೇರೆ ಯಾವುದೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಸಮಾಜ ವಿರೋಧಿ ನೀತಿ ಖಂಡಿಸುತ್ತೇವೆ: ಸರ್ಜಿಕಲ್ ವೇಳೆ ಸಾಕ್ಷಿ ಕೇಳಿದ ಕಾಂಗ್ರೆಸ್, ಕುಕ್ಕರ್ ತನಿಖೆ ವೇಳೆ ಸಮರ್ಥನೆ ನೋಡಿದ್ರೆ ಕಾಂಗ್ರೆಸ್ ನಿಷ್ಟೆ ಎಲ್ಲಿದೆ..? ಕಾಂಗ್ರೆಸ್ಗೆ ಚೀನಾ ಮೇಲೆ ನಿಷ್ಟೆ ಇದೆಯಾ..? ಶಾರಿಕ್ ಅಕೌಂಟ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣ ಸಂದಾಯ ಆಗುತ್ತಿದ್ದರೂ ಕಾಂಗ್ರೆಸ್ ಸಮರ್ಥನೆ ನೋಡಿದರೆ ದಿವಾಳಿ ಆಗುತ್ತಿದೆ ಅನ್ನಿಸುತ್ತದೆ. ಉಗ್ರವಾದ, ಸಮಾಜ ವಿರೋಧಿ ನೀತಿಯನ್ನು ನಾವು ಖಂಡಿಸುತ್ತೇವೆ. ಈ ದೇಶಕ್ಕೆ ಕಾಂಗ್ರೆಸ್ ನಿಷ್ಟರಲ್ಲ ಎಂದು ಸುನಿಲ್ ಕುಮಾರ್ ಆರೋಪಿಸಿದರು.