ಬೆಂಗಳೂರು: ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಭಯೋತ್ಪಾದಕರ ಸಂಪರ್ಕದ ಶಂಕೆ ಮೇಲೆ ಆರೋಪಿಯೊಬ್ಬನನ್ನ ಸಿಸಿಬಿ ಮತ್ತು anti terrorist cell (ಎಟಿಸಿ) ವಿಚಾರಣೆ ನಡೆಸುತ್ತಿದೆ.
ಡಿಜೆ ಹಳ್ಳಿ ಠಾಣೆಯಲ್ಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಿರಾಜುದ್ದೀನ್ ನನ್ನು ಬಂಧಿಸಲಾಗಿತ್ತು. ಆದರೆ, ಈತನಿಗೆ ಉಗ್ರ ಸಂಘಟನೆಗಳ ಸಂಪರ್ಕ ಇರುವ ಕಾರಣ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಆದರೆ, ತನಿಖೆಯಲ್ಲಿ ಉಗ್ರ ಸಂಬಂಧದ ಯಾವುದೇ ಸುಳಿವು ಸಿಕ್ಕಿಲ್ಲ. ಈ ಹಿನ್ನೆಲೆ ಇಂದು ನ್ಯಾಯಾಧೀಶರ ಮುಂದೆ ಆರೋಪಿಯನ್ನ ಹಾಜರುಪಡಿಸಿ ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಸಿರಾಜುದ್ದೀನ್ ಡಿಜೆ ಹಳ್ಳಿ ನಿವಾಸಿ ಆಗಿದ್ದು, ಈತ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗುತ್ತಿದೆ. ಹೀಗಾಗಿ ನಿನ್ನೆ ತಡರಾತ್ರಿ ಮನೆಯಲ್ಲಿದ್ದ ಸಿರಾಜುದ್ಧೀನ್ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು. ಸದ್ಯ ಎಟಿಸಿ ಮತ್ತು ಸಿಸಿಬಿ ಪೊಲೀಸರ ವಿವಿಧ ತಂಡಗಳು ಆರೋಪಿಯನ್ನು ತೀವ್ರ ವಿಚಾರಣೆ ನಡೆಸ್ತಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಂದೀಪ್ ಪಾಟೀಲ್ ಮತ್ತು ಸಿಸಿಬಿಯ ಡಿಸಿಪಿ ನೇತೃತ್ವದಲ್ಲಿ ತನಿಖೆ ಮುಂದುವರೆಸಿದ್ದಾರೆ. ಸದ್ಯ ಪ್ರಕರಣ ಗಂಭೀರತೆ ಹೆಚ್ಚಾಗಿದ್ದು, ಪ್ರಕರಣ ಹಲವಾರು ಆಯಾಮಗಳನ್ನು ಪಡೆಯುತ್ತಿದೆ. ಈ ಕಾರಣ ಸದ್ಯ ಪ್ರಕರಣದಲ್ಲಿ ಹಲವರನ್ನ ವಿಚಾರಣೆ ನಡೆಸುವ ಸಾಧ್ಯತೆ ಇದೆ.