ಬೆಂಗಳೂರು: ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನವನ್ನ ಬಿಜೆಪಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈ ವಿದ್ಯಮಾನದಿಂದಾಗಿ ಪತನದ ಭೀತಿ ಎದುರಿಸುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಸದ್ಯಕ್ಕೆ ಸೇಫ್ ಆಗಿದೆ.
ಲೋಕಸಭೆ ಚುನಾವಣೆ ಬಳಿಕ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಬಿಜೆಪಿಯು ಮೈತ್ರಿ ಪಕ್ಷಗಳ ಶಾಸಕರನ್ನು ಸೆಳೆದು ಕುಮಾರಸ್ವಾಮಿ ಸರ್ಕಾರ ಅಸ್ಥಿರಗೊಳಿಸಲಿದೆ ಎಂದು ರಾಜಕೀಯವಾಗಿ ಭಾವಿಸಲಾಗಿತ್ತು. ಮೋದಿಯವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೈತ್ರಿ ಸರ್ಕಾರ ಪತನಕ್ಕೆ ಮುಹೂರ್ತ ನಿಗದಿಗೊಳಿಸಲಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿಯು ರಾಜ್ಯದಲ್ಲಿನ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನದಿಂದ ಹಿಂದೆ ಸರಿದಿದೆ.
ಮೊದಲು ಅಂದುಕೊಂಡಂತೆ ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ತಕ್ಷಣ ಬಿಜೆಪಿ ಆಪರೇಷನ್ ಕಮಲ ನಡೆಸಿಬಿಡುತ್ತೇನೊ ಎನ್ನುವ ರೀತಿಯಲ್ಲಿ ತೆರೆಮರೆಯಲ್ಲಿ ರಾಜಕೀಯ ಚಟುವಟಿಕೆಗಳು ನಡೆಯತೊಡಗಿದ್ದವು. ಕಾಂಗ್ರೆಸ್ ಪಕ್ಷದ ರೆಬಲ್ ನಾಯಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದ ಭಿನ್ನಮತೀಯ ಶಾಸಕರ ಸೆಳೆಯುವ ಕಸರತ್ತೂ ಸಹ ಆರಂಭಿಸಿದ್ದರು.
ಈ ಬೆಳವಣಿಗೆಗಳಿಂದ ಸರ್ಕಾರಕ್ಕೆ ಅಪಾಯ ಒದಗುವ ಮುನ್ಸೂಚನೆ ಅರಿತ ದೋಸ್ತಿ ಪಕ್ಷಗಳ ಹಿರಿಯ ನಾಯಕರಾದ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅದ್ಯಕ್ಷ ದಿನೇಶ್ ಗುಂಡೂರಾವ್ ಕೂಡಲೇ ಅಖಾಡಕ್ಕಿಳಿದು ಅತೃಪ್ತ ಶಾಸಕರ ಜತೆ ಪ್ರತ್ಯೇಕ ಮಾತುಕತೆ ನಡೆಸಿ ಕೆಲವರಿಗೆ ಸಚಿವ ಸ್ಥಾನದ ಆಫರ್ ಕೂಡಾ ನೀಡಿ ದೋಸ್ತಿ ಸರ್ಕಾರ ರಕ್ಷಣೆಗೆ ರಾಜಕೀಯ ತಂತ್ರಗಾರಿಕೆ ರೂಪಿಸಿದರು.
ಸರ್ಕಾರ ಬೀಳಿಸುವ ಬಿಜೆಪಿಯ ತಂತ್ರವನ್ನು ವಿಫಲಗೊಳಿಸುವ ಪ್ರಯತ್ನವನ್ನು ದೋಸ್ತಿ ಪಕ್ಷಗಳ ಹಿರಿಯ ನಾಯಕರು ಒಟ್ಟಾಗಿ ಸೇರಿ ಯಶಸ್ವಿಯಾಗಿ ಮಾಡುತ್ತಿದ್ದಾರೆ. ಇದರಿಂದ ಭಿನ್ನಮತೀಯ ಶಾಸಕರು ಗೊಂದಲಕ್ಕೆ ಸಿಲುಕಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಒಬೊಬ್ಬ ಭಿನ್ನಮತೀಯ ಶಾಸಕರು ಯೂ ಟರ್ನ್ ಹೊಡೆಯುತ್ತಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಆಪರೇಷನ್ ಕಮಲ ಮಾಡಲೂ ಸಹ ಬಿಜೆಪಿಗೆ ಕಷ್ಟಕರವಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.