ಬೆಂಗಳೂರು: ಟೆಂಪೋವೊಂದು ಅಡ್ಡಾದಿಡ್ಡಿ ಸಂಚರಿಸಿ, ರಸ್ತೆ ಬದಿ ಸಾಗುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದು, ಬಳಿಕ ಕರೆಂಟ್ ಕಂಬಕ್ಕೆ ಗುದ್ದಿರುವ ಘಟನೆ ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹಗದೂರಿನಲ್ಲಿ ಗುರುವಾರ ಬೆಳಿಗ್ಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚಾಲಕನ ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣವಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಅಪಘಾತದ ಭೀಕರ ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ಸರೆಯಾಗಿದೆ.
ಗೂಡ್ಸ್ ಟೆಂಪೋ ಬೆಳಿಗ್ಗೆ ಸುಮಾರು 7.30ರ ಹೊತ್ತಿಗೆ ಹಗದೂರು ಕಡೆಗೆ ಬರುತ್ತಿದ್ದಾಗ ಅಪಘಾತ ನಡೆದಿದೆ. ಚಾಲಕ 22 ವರ್ಷದ ಕಿಟ್ಟು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶ್ರೀನಿವಾಸ್ ಹಾಗೂ ಅಪ್ಪಣ್ಣ ಎಂಬವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಕಿಟ್ಟು, ಹಗದೂರು ಸಮೀಪ ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಬಂದಿದ್ದು, ತಿರುವಿನಲ್ಲಿ ನಿಯಂತ್ರಣ ಸಿಗದೆ ಅಡ್ಡಾದಿಡ್ಡಿ ಚಾಲನೆ ಮಾಡಿದ್ದಾನೆ. ಈ ವೇಳೆ ಬೈಕ್ನಲ್ಲಿ ಕುಳಿತಿದ್ದ ಅಪ್ಪಣ್ಣ ಹಾಗೂ ಫೋನ್ನಲ್ಲಿ ಮಾತಾಡುತ್ತಿದ್ದ ಶ್ರೀನಿವಾಸ್ಗೆ ವಾಹನ ಡಿಕ್ಕಿಯಾಗಿದೆ.
ಅಪಘಾತದ ರಭಸಕ್ಕೆ ಅಪ್ಪಣ್ಣ ನೆಲಕ್ಕೆ ಬಿದ್ದು ತಲೆಗೆ ಪೆಟ್ಟಾಗಿದೆ. ಶ್ರೀನಿವಾಸ್ ಕಾಲಿಗೆ ಗಂಭೀರ ಗಾಯವಾಗಿದೆ. ಅಪ್ಪಣ್ಣ ಸ್ಥಳೀಯ ವ್ಯಕ್ತಿಯಾಗಿದ್ದು, ಶ್ರೀನಿವಾಸ್ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿದ್ದಾರೆ. ವಿದ್ಯುತ್ ಕಂಬದ ಮುಂಭಾಗ ನಜ್ಜುಗುಜ್ಜಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ವೈಟ್‌ಫೀಲ್ಡ್ ಸಂಚಾರಿ ಠಾಣೆ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಚಾಲಕನ ರಕ್ತದ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದ್ದು ವರದಿ ಬಂದ ಬಳಿಕ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ವೃದ್ಧನಿಗೆ ಡಿಕ್ಕಿಯಾಗಿ ಬಸ್ ಚಕ್ರದಡಿ ಸಿಲುಕಿದ ಬೈಕ್; ಮಹಿಳೆ ಸಾವು