ಅನ್ಲಾಕ್-3.0 ನಲ್ಲಿ ರಾಜ್ಯಾದ್ಯಂತ ದೇವಾಲಯಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳಿಂದ ಬೀಗ ಹಾಕಿದ್ದ ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ಇಂದು ಸ್ವಚ್ಛತಾ ಕಾರ್ಯ ಭರದಿಂದ ನಡೆಯುತ್ತಿದೆ.
ಕೊಪ್ಪಳದ ಹುಲಿಗೆಮ್ಮ ದೇವಸ್ಥಾನ:
ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಪ್ರಸಿದ್ದ ಹುಲಿಗೆಮ್ಮ ದೇವಸ್ಥಾನ ತೆರೆಯಲು ಸಿದ್ಧತೆ ನಡೆದಿದೆ. ರಾಜ್ಯ ಸೇರಿದಂತೆ ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಿಂದ ಲಕ್ಷಾಂತರ ಭಕ್ತರು ಈ ದೇವಸ್ಥಾನಕ್ಕೆ ಬರುತ್ತಾರೆ. ಆದರೆ ಕಳೆದ ತಿಂಗಳು ಹುಲಿಗೆಮ್ಮದೇವಿ ಜಾತ್ರೆಯ ಸಂದರ್ಭದಲ್ಲಿಯೂ ದೇವಸ್ಥಾನ ಬಂದ್ ಆಗಿತ್ತು. ನಾಳೆಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲು ಸ್ವಚ್ಛತಾ ಕಾರ್ಯ ಸ್ಯಾನಿಟೈಸ್ ಸಿಂಪಡಣೆ ಸೇರಿದಂತೆ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.
ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನಲ್ಲೂ ಸ್ಬಚ್ಛತೆ ಕಾರ್ಯ:
ವಿಶ್ವವಿಖ್ಯಾತ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲೂ ಇಂದು ಸ್ಬಚ್ಛತೆ ಮಾಡಲಾಯಿತು. ವಿರೂಪಾಕ್ಷೇಶ್ವರ, ಪಂಪಾಂಬಿಕೆ, ಭುವನೇಶ್ವರಿ, ಕೋದಂಡರಾಮ ದೇವಸ್ಥಾನವನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಿಬ್ಬಂದಿ ಸ್ವಚ್ಛತೆ ಮಾಡಿದರು. ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗುವುದು. ಜತೆಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು. ಜೊತೆಗೆ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಗೆರೆಗಳ ಮೂಲಕ ಬಾಕ್ಸ್ ಹಾಕಲಾಗುವುದು. ಭಕ್ತರು ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಮೈಸೂರು ಚಾಮುಂಡೇಶ್ವರಿ ದೇವಸ್ಥಾನ:
ನಾಡಿನ ಪ್ರಖ್ಯಾತ ದೇಗುಲ ಚಾಮುಂಡೇಶ್ವರಿ ದೇವಸ್ಥಾನ ಹಾಗೂ ಸುತ್ತಮುತ್ತಲ ಪ್ರದೇಶಕ್ಕಿಂದು ಸ್ಯಾನಿಟೈಸ್ ಮಾಡಲಾಯಿತು. 70 ದಿನಗಳ ಬಳಿಕ ದೇವಸ್ಥಾನಕ್ಕೆ ಭಕ್ತರು ಆಗಮಿಸುತ್ತಿದ್ದು ಚಾಮುಂಡಿಬೆಟ್ಟದಲ್ಲಿ ದೇವಾಲಯದ ಹೊರ, ಒಳಾವರಣ ಸ್ಯಾನಿಟೈಸ್ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಪೌರಕಾರ್ಮಿಕರಿಂದ ದೇವಸ್ಥಾನ ಹಾಗೂ ಭಕ್ತಾದಿಗಳು ಸರತಿ ಸಾಲಿನಲ್ಲಿ ಬರುವ ಸ್ಥಳ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಸ್ಯಾನಿಟೈಸ್ ಮಾಡಲಾಗಿದೆ.