ಬೆಂಗಳೂರು: ಸಂಚಾರದಟ್ಟಣೆ ಮಧ್ಯೆಯೇ ಆ್ಯಂಬುಲೆನ್ಸ್ ಗಳ ಸುಗಮ ಸಂಚಾರಕ್ಕೆ "ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆಂಬುಲೆನ್ಸ್ ನಿರ್ವಹಣಾ ವ್ಯವಸ್ಥೆ" ಜಾರಿಗೆ ಯೋಜನೆ ರೂಪಿಸಿದ್ದು ಮುಂದಿನ ಐದು ತಿಂಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮಾಹಿತಿ ನೀಡಿದೆ.
ಭಾರತ್ ಪುನರುತ್ಥಾನ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರದ ಪರ ವಕೀಲರು ಈ ಮಾಹಿತಿ ನೀಡಿದ್ದಾರೆ.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಲಿಖಿತ ಮಾಹಿತಿ ನೀಡಿ, ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆ ಜಾರಿಗೆ 1,800 ಕೋಟಿ ರೂಪಾಯಿ ವೆಚ್ಚದ ಯೋಜನೆ ರೂಪಿಸಲಾಗಿದೆ. ದೊಡ್ಡ ಮೊತ್ತದ ಯೋಜನೆ ಆಗಿರುವುದರಿಂದ ಕೆಟಿಪಿಪಿ ಕಾಯ್ದೆ ಅನ್ವಯ ಟೆಂಡರ್ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಪ್ರಸ್ತಾವನೆಗೆ ಸಚಿವ ಸಂಪುಟದ ಅನುಭವ ಪಡೆದುಕೊಳ್ಳಬೇಕಾಗುತ್ತದೆ. ಈ ಎಲ್ಲ ಪ್ರಕ್ರಿಯೆಗೆ ಕನಿಷ್ಠ ಐದು ತಿಂಗಳು ತಗಲುತ್ತದೆ ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ ವಾದಿಸಿ ತುರ್ತು ಸಂದರ್ಭಗಳಲ್ಲಿ ಕೆಟಿಪಿಪಿ ಕಾಯ್ದೆಯಿಂದ ವಿನಾಯಿತಿ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಪ್ರಸ್ತುತ ಆಂಬುಲೆನ್ಸ್ ಗಳ ಸೇವೆ ಅನಿವಾರ್ಯವಾಗಿದೆ ಹಾಗೂ ಇದರಿಂದ ಸಾರ್ವಜನಿಕರಿಗೆ ಅನುಕೂಲ ಆಗಲಿದೆ. ಈ ಪರಿಸ್ಥಿತಿಯನ್ನು ಅರಿತುಕೊಂಡು ಸರಕಾರ ಶೀಘ್ರ ಕ್ರಮ ಜರುಗಿಸಬೇಕು ಎಂದರು.
ವಾದ ಪ್ರತಿವಾದ ಆಲಿಸಿದ ಪೀಠ, ಪ್ರಕರಣವನ್ನು ಹೈಕೋರ್ಟ್ ಮೇಲ್ವಿಚಾರಣೆ ಮಾಡುತ್ತಿದೆ. ಸರ್ಕಾರ ಟೆಂಡರ್ ಪ್ರಕ್ರಿಯೆ ನಡೆಸಿ ಆದಷ್ಟು ಬೇಗ ಆಂಬುಲೆನ್ಸ್ ಸೇವೆ ಸಾರ್ವಜನಿಕ ರಿಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಿ ಎಂದು ಸೂಚಿಸಿ, ಈ ಕುರಿತ ಪ್ರಗತಿ ವರದಿಯನ್ನು ಸಪ್ಟೆಂಬರ್ 30ಕ್ಕೆ ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಅಕ್ಟೋಬರ್ 1ಕ್ಕೆ ಮುಂದೂಡಿತು.