ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾದೊಂದಿಗೆ ಲಿಂಕ್ ಹೊಂದಿದ್ದ ಬಿಗ್ ಡ್ರಗ್ ಪೆಡ್ಲರ್ ವಿನ್ಸೆಂಟ್ ಎಂಬ ಆರೋಪಿಯನ್ನು ಬಂಧಿಸಲಾಗಿದ್ದು, ಈ ಆರೋಪಿ ದೈತ್ಯ ಗಾತ್ರದ ದೇಹ ಹೊಂದಿರುವ ಕಾರಣ ಈತನನ್ನು ಸೆರೆ ಹಿಡಯಲು 10 ಜನ ಪೊಲೀಸರ ವಿಶೇಷ ತಂಡ ನಿಯೋಜಿಸಲಾಗಿತ್ತು ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಟಿ ಉದ್ಯೋಗದಲ್ಲಿರುವವರಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಮಾಹಿತಿ ಮೇರೆಗೆ ವಿನ್ಸೆಂಟ್ ಎಂಬಾತನನ್ನು ಬಂಧಿಸಲಾಗಿದೆ. ಬಾಣಸವಾಡಿಯಲ್ಲಿ ವಾಸಮಾಡುತ್ತಿದ್ದ ಮನೆಯಲ್ಲಿ ಡ್ರಗ್ಸ್ಗಳನ್ನು ಶೇಖರಣೆ ಮಾಡಿರುವ ಬಗ್ಗೆ ಮಾಹಿತಿ ದೊರಕಿದೆ.
ಸದ್ಯ ಆರೋಪಿಯ ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಲಾಗಿದ್ದು, ವಿನ್ಸೆಂಟ್ ಎಂಬಾತ ದೊಡ್ಡ ಗಾತ್ರದ ದೇಹವನ್ನು ಹೊಂದಿದ್ದ ಕಾರಣ 10 ಜನ ಪೊಲೀಸರ ವಿಶೇಷ ತಂಡ ರಚಿಸಿ, ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದಿದ್ದಾರೆ.
ಇನ್ನು ತನಿಖೆ ವೇಳೆ ಕಾಲೇಜು ವಿದ್ಯಾರ್ಥಿಗಳಿಗೆ, ಉದ್ಯಮಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆತಿದ್ದು, ವಿನ್ಸೆಂಟ್ ಬಳಿ ಡ್ರಗ್ಸ್ ತೆಗೆದುಕೊಂಡವರ ಬಗ್ಗೆಯೂ ಮಾಹಿತಿ ಇದೆ. ಈ ಬಗ್ಗೆ ತನಿಖೆ ಮುಂದುವರೆಸಿದ್ದು, ಆರೋಪಿಗಳ ಜೊತೆ ಲಿಂಕ್ ಇರುವ ಮತ್ತಿತರರನ್ನು ಕೂಡ ಖೆಡ್ಡಾಕ್ಕೆ ಕೆಡವಲಾಗುವುದು ಎಂದಿದ್ದಾರೆ.