ಬೆಂಗಳೂರು : ಇಂದು ನಗರದ ಶಿಕ್ಷಕರ ಸದನದಲ್ಲಿ ಸರಳವಾಗಿ ಶಿಕ್ಷಕರ ದಿನಾಚರಣೆ ಆಯೋಜಿಸಲಾಗಿತ್ತು. ಆದರೆ, ವಿಪರ್ಯಾಸ ನೋಡಿ ಈ ಕಾರ್ಯಕ್ರಮದಲ್ಲಿ ಸಂಭ್ರಮದಿಂದಲೇ ಪಾಲ್ಗೊಳ್ಳಬೇಕಿದ್ದ ಖಾಸಗಿ ಶಾಲಾ ಶಿಕ್ಷಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೊರಗೆ ಧರಣಿ ನಡೆಸಿದ್ದಾರೆ. ಅಷ್ಟೇ ಅಲ್ಲ, ಸ್ಥಳಕ್ಕಾಗಮಿಸಿದ ಶಿಕ್ಷಣ ಸಚಿವರಿಗೆ ಮ್ಯಾಗಿ ಪ್ಯಾಕೇಟ್ ಕೊಟ್ಟು ಶಿಕ್ಷಕರ ದಿನದ ಶುಭ ಕೋರಿದ್ದಾರೆ.
ಈ ವೇಳೆ ಸಭಾಂಗಣದಲ್ಲಿ ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತಾನಾಡಿದ ಶಿಕ್ಷಣ ಸಚಿವ ಸುರೇಶ್‌ಕುಮಾರ್, ಕೊರೊನಾದಿಂದಾಗಿ ಖಾಸಗಿ ಅನುದಾನರಹಿತ ಶಾಲಾ ಶಿಕ್ಷಕರ ಮೇಲೆ ದೊಡ್ಡ ಪೆಟ್ಟು ಬಿದ್ದಿದೆ. ಅವರಿಗೆ ಆಗುತ್ತಿರುವ ತೊಂದರೆ, ಅವರ ಬೇಡಿಕೆ ಎಲ್ಲವೂ ಅರ್ಥವಾಗಿದೆ. ಕಳೆದ 4-5 ತಿಂಗಳಿನಿಂದ ಅವರಿಗೆ ಸಂಬಳವಿಲ್ಲ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಈ ವರ್ಷ ಶೈಕ್ಷಣಿಕ ದಾಖಲಾತಿ ಮಾಡಲು ಆಗಲಿಲ್ಲ. ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ ಕೊಡುವವರೆಗೆ ಶಾಲೆಯ ಆರಂಭವೂ ಕಷ್ಟ ಎಂದರು.
ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ : ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ನೀಡುವ ಸಂಬಂಧ ಹಣಕಾಸು ಇಲಾಖೆಯೊಂದಿಗೆ ಹಾಗೂ ಸರ್ಕಾರಿ ಶಾಲಾ ಶಿಕ್ಷಕರ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲಾಗಿದೆ. ಸಹಾಯ ಮಾಡುವಂತೆ ಮನವಿ ಮಾಡಿದ್ದೇನೆ. ಆದರೆ, ಒಕ್ಕೂಟಗಳು ಕೇಳುತ್ತಿರುವ ಪ್ರಮಾಣದ ಹಣ ವ್ಯವಸ್ಥೆ ಮಾಡಲು ಆಗುತ್ತಿಲ್ಲ. ಆದರೆ, ಕೂಡಲೇ ಈ ಸಮಸ್ಯೆ ಸ್ವಲ್ಪಮಟ್ಟಿಗೆ ಸರಿಮಾಡಲು ಕ್ರಮಕೈಗೊಳ್ಳುವ ಭರವಸೆ ನೀಡಿದರು. ಆರ್ಟಿಇ ಹಣ ಮರುಪಾವತಿಗೂ ಮುಖ್ಯಮಂತ್ರಿಗಳ ಬಳಿ ಒತ್ತಾಯ ಮಾಡಲಾಗುವುದು ಎಂದರು.
ವಿದ್ಯಾಗಮ ಯೋಜನೆ ಕೇವಲ ಸರ್ಕಾರಿ ಮಕ್ಕಳಿಗಷ್ಟೇ ಅಲ್ಲ : ವಿದ್ಯಾಗಮ ಯೋಜನೆ ವಿರುದ್ಧ ಖಾಸಗಿ ಅನುದಾನ ರಹಿತ ಶಾಲೆಗಳು ಆರೋಪಗಳ ಸುರಿಮಳೆಗೈದಿವೆ. ವಾಮಮಾರ್ಗದಲ್ಲಿ ಖಾಸಗಿ ಶಾಲಾ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರುವಂತೆ ಪ್ರಚೋದನೆ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ವಿದ್ಯಾಗಮ ಯೋಜನೆ ಕೇವಲ ಸರ್ಕಾರಿ ಶಾಲೆ ಮಕ್ಕಳಿಗಾಗಿ ಅಲ್ಲ. ಬದಲಿಗೆ ಅನುದಾನ ರಹಿತ ಶಾಲೆಗಳು ಭಾಗಿಯಾಗಿ ಪ್ರಯೋಜನ ಪಡೆದುಕೊಳ್ಳಬಹುದು.
ಒಂದು ವೇಳೆ ಭಿನ್ನ ಮಾರ್ಗ ಇದ್ದರೆ ಅದನ್ನೂ ಮಾಡಬಹುದು. ಅನೇಕ ಖಾಸಗಿ ಶಾಲೆಗಳು ಆನ್‌ಲೈನ್ ಪಾಠ ಮಾಡುತ್ತಿವೆ. ಅದನ್ನು ಆ ಮಾರ್ಗ ಈ ಮಾರ್ಗ ಅಂತಾ ನಾವು ಕರೆಯೋದಿಲ್ಲ. ನಮ್ಮ ಮಕ್ಕಳಿಗೆ ಆನ್‌ಲೈನ್‌ಗಿಂತ ಇದು ಉತ್ತಮ ಎಂಬ ಕಾರಣಕ್ಕೆ ವಿದ್ಯಾಗಮ ಯೋಜನೆ ಮಾಡಲಾಗುತ್ತಿದೆ. ಖಾಸಗಿ ಶಾಲೆಗಳು ಕೂಡ ವಿದ್ಯಾಗಮ ಯೋಜನೆ ಅನುಸರಿಸಲು ಪೂರ್ತಿ ಸ್ವತಂತ್ರ ಎಂದರು.