ಬೆಂಗಳೂರು: ಸರ್ಕಾರಿ ಶಿಕ್ಷಕರ ವರ್ಗಾವಣೆಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ನೀಡಿದ್ದ ತಡೆಯಾಜ್ಞೆ ತೆರವಾದ ಬೆನ್ನಲ್ಲೇ ಸಾರ್ವಜನಿಕ ಶಿಕ್ಷಣ ಇಲಾಖೆ, ವರ್ಗಾವಣೆ ಪ್ರಕ್ರಿಯೆಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.
ಆಯಾ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿಭಾಗೀಯ ಸಹನಿರ್ದೇಶಕರು ತಮ್ಮ ವ್ಯಾಪ್ತಿಯಲ್ಲಿ ಅ.1ರವರೆಗೆ ವರ್ಗಾವಣೆಗೆ ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನು ಅ.25ರಂದು ಪ್ರಕಟಿಸಬೇಕು. 2019ರಲ್ಲಿ ಕಡ್ಡಾಯ ವರ್ಗಾವಣೆಗೆ ಒಳಗಾಗಿದ್ದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅ.26ರಿಂದ, ಪ್ರೌಢ ಶಾಲಾ ಶಿಕ್ಷಕರಿಗೆ ಅ.28ರಿಂದ ಕೌನ್ಸಿಲಿಂಗ್ ನಡೆಸಬೇಕು ಎಂದು ಇಲಾಖೆ ಅಧಿಸೂಚನೆ ಹೊರಡಿಸಿದೆ.
ಹೊಸ ವೇಳಾಪಟ್ಟಿ ಪ್ರಕಾರ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯಶಿಕ್ಷಕರು, ಸಹ ಶಿಕ್ಷಕರು ಹಾಗೂ ತತ್ಸಮಾನ ಹುದ್ದೆಗಳ ವರ್ಗಾವಣೆ ಪ್ರಕ್ರಿಯೆ ಅ.25ರಿಂದ 2022ರ ಫೆಬ್ರವರಿ 26ರವರೆಗೂ ನಡೆಯಲಿದೆ.
ತಡೆಯಾಜ್ಞೆ ಯಾಕೆ:
ಶಿಕ್ಷಣ ಇಲಾಖೆಯು ಶಿಕ್ಷಕರ ವರ್ಗಾವಣೆಗಾಗಿ ಕೌನ್ಸಲಿಂಗ್ ದಿನಾಂಕ ನಿಗದಿ ಮಾಡಿತ್ತು. ಆದರೆ ಕೌನ್ಸಲಿಂಗ್ ಆರಂಭವಾಗುವ ಕೊನೆ ಕ್ಷಣದಲ್ಲಿ ಕೆಲ ಶಿಕ್ಷಕರು ವರ್ಗಾವಣೆಯನ್ನು ಪ್ರಶ್ನಿಸಿ ಕೆಎಟಿ ಮೊರೆ ಹೋಗಿದ್ದರು. ಇದನ್ನು ಶಿಕ್ಷಣ ಇಲಾಖೆ ಪ್ರಶ್ನಿಸಿತ್ತು. ಈ ಹಿನ್ನೆಲೆಯಲ್ಲಿ ವರ್ಗಾವಣೆಗೆ ತಡೆ ನೀಡಲಾಗಿತ್ತು.ಇದೀಗ ಇಲಾಖೆ ಪರವಾಗಿ ತೀರ್ಪು ಬಂದಿದ್ದು, ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಶಿಕ್ಷಣ ಇಲಾಖೆ ಮುಂದಾಗಿದೆ. ವರ್ಗಾವಣೆಗಾಗಿ ಸುಮಾರು 72,000 ಶಿಕ್ಷಕರು ಅರ್ಜಿ ಸಲ್ಲಿಸಿ ಕೌನ್ಸಿಲಿಂಗ್ಗಾಗಿ ಕಾಯುತ್ತಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯರ ಆರೋಪಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ಬಿಎಸ್ವೈ