ಬೆಂಗಳೂರು: ರಾಜ್ಯ ಸರ್ಕಾರವು ಇಂದು ಕೋವಿಡ್ ಲಸಿಕೆ ನೀಡುವ ವಿಚಾರದಲ್ಲಿ ಶಿಕ್ಷಕರನ್ನ ಫ್ರಂಟ್ ಲೈನ್ ವಾರಿಯರ್ಸ್ ಎಂದು ಸೂಚಿಸಿದೆ. ಶಿಕ್ಷಕರನ್ನ ಫ್ರಂಟ್ ಲೈನ್ ವಾರಿಯರ್ಸ್ ಅಂದ್ರಿ ಓಕೆ. ಆದರೆ ವಿಶೇಷ ಪ್ಯಾಕೇಜ್ ಘೋಷಣೆ ಯಾಕೆ ಮಾಡಿಲ್ಲ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಮಾತಾನಾಡಿರುವ ಕ್ಯಾಮ್ಸ್ನ ಕಾರ್ಯದರ್ಶಿ ಶಶಿಕುಮಾರ್, ಫ್ರಂಟ್ ಲೈನ್ ವಾರಿಯರ್ಸ್ ಎಂದು ಹೇಳಿದರೂ ದೊಡ್ಡ ಅಸಮಾಧಾನ ಇದೆ. ಯಾಕೆಂದರೆ, ವರ್ಷದಿಂದ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು, ಶಿಕ್ಷಕರು-ಶಿಕ್ಷಕೇತರ ಸಿಬ್ಬಂದಿ ಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ. ಅವರಿಗೆ ಸಹಕಾರ ಕೊಡಲು ಮನವಿ ಮಾಡಿದ್ದೇವೆ. ಆದರೆ ರಾಜ್ಯ ಸರ್ಕಾರ ಕಿವಿ ಮೇಲೆ ಹಾಕಿಕೊಂಡಿಲ್ಲ. ಒಂದೇ ಒಂದು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಶಿಕ್ಷಕರ ಕ್ಷೇತ್ರದಿಂದ ಗೆದ್ದ ಎಂಎಲ್ಸಿಗಳು ರಾಜೀನಾಮೆ ಕೊಟ್ಟು ವಿರೋಧಿಸಬೇಕು ಎಂದು ಆಗ್ರಹಿಸಿದರು.
ರೂಪ್ಸಾ ಸಂಘದ ಲೋಕೇಶ್ ತಾಳಿಕಟ್ಟೆ ಮಾತಾನಾಡಿ, ಕೋವಿಡ್ ಹಿನ್ನೆಲೆಯಲ್ಲಿ 2 ಲಕ್ಷಕ್ಕೂ ಅಧಿಕ ಶಿಕ್ಷಕರು ಕೆಲಸವಿಲ್ಲದೇ ಬೀದಿಬದಿ ವ್ಯಾಪಾರಕ್ಕೆ ಮುಂದಾಗಿದ್ದಾರೆ. ಸಾಕಷ್ಟು ಸಲ ಸಂಬಂಧಪಟ್ಟ ಇಲಾಖೆಗೆ ಮನವಿ ನೀಡಿದರೂ ಯಾರು ಕೂಡ ಸ್ಪಂದಿಸಿಲ್ಲ. ಪ್ರತಿ ವಲಯಕ್ಕೂ ಪ್ಯಾಕೇಜ್ ಘೋಷಣೆ ಮಾಡಿದ್ದೀರಿ. ಆದರೆ ಪಾಠ ಮಾಡುವ ಮೇಷ್ಟ್ರು ಕಾಣಿಸುತ್ತಿಲ್ವಾ ಎಂದು ಬೇಸರ ವ್ಯಕ್ತಪಡಿಸಿದರು.