ಬೆಂಗಳೂರು: ಕಳೆದ 2 ವರ್ಷಗಳಿಂದ ಪ್ರವಾಸೋದ್ಯಮ ಕುಂಠಿತಗೊಂಡ ಹಿನ್ನೆಲೆ, ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲರಿಗೂ ಆಸ್ತಿ ತೆರಿಗೆಯಲ್ಲಿ ಶೇ. 50ರಷ್ಟು ವಿನಾಯಿತಿ ನೀಡಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಪಂಕಜ್ ದೇವ್ ಪಾಂಡೆ ತಿಳಿಸಿದರು.
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ 'ಭಾರತ ಪ್ರಯಾಣ ಮತ್ತು ಪ್ರವಾಸೋದ್ಯಮ ಪ್ರದರ್ಶನ'ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅನೇಕ ಪ್ರವಾಸೋದ್ಯಮ ಸ್ಥಳಗಳಿದ್ದು, ಶೇ.14ರಷ್ಟು ಜಿಡಿಪಿ ಇದರಿಂದಲೇ ಬರುತ್ತಿದೆ. ಹಾಗಾಗಿ ಕುಗ್ಗಿರುವ ಪ್ರವಾಸೋದ್ಯಮ ಮೇಲೆತ್ತುವ ನಿಟ್ಟಿನಲ್ಲಿ ಕೆಲವು ವಿನಾಯಿತಿ ನೀಡಲಾಗುತ್ತಿದೆ. 3 ತಿಂಗಳ ವಿದ್ಯುತ್ ಬಿಲ್‌ನಲ್ಲಿ ವಿನಾಯಿತಿ ಸೇರಿದಂತೆ ಇತರ ಸಡಿಲಿಕೆಗಳನ್ನು ನೀಡಲು ಯೋಚಿಸಲಾಗುತ್ತಿದೆ. ಪ್ರವಾಸೋದ್ಯಮ ಮರು ಆರಂಭವಾಗಲಿದೆ ಎಂದರು.
ಮಾರ್ಚ್ 19 ರಿಂದ ಗೋವಾ ಪಾರಂಪರಿಕ ಹಬ್ಬ: ಗೋವಾ ಪ್ರವಾಸೋದ್ಯಮ ನಿಗಮದ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮೀನಾಥ 'ಈಟಿವಿ ಭಾರತ'ದೊಂದಿಗೆ ಮಾತನಾಡಿ, ಅನೇಕ ಕಾಲದ ನಂತರ ಗೋವಾ ರಾಜ್ಯ ಪ್ರವಾಸೋದ್ಯಮ ಸಂಪೂರ್ಣವಾಗಿ ತೆರೆದುಕೊಂಡಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಅವರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲು ನಾವು ಬದ್ದರಾಗಿದ್ದೇವೆ. ಮಾರ್ಚ್ 19 ರಿಂದ ಗೋವಾ ಪಾರಂಪರಿಕ ಹಬ್ಬ ಆರಂಭವಾಗಲಿದ್ದು, ದೇಶದೆಲ್ಲೆಡೆಯಿಂದ ಜನರನ್ನು ಅಪೇಕ್ಷಿಸುತ್ತಿದ್ದೇವೆ ಎಂದರು.
ಜಮ್ಮುಕಾಶ್ಮೀರದಲ್ಲಿ ಪ್ರವಾಸಿಗರಿಗೆ ಸುಂದರ ಅನುಭವ: ಗುಲ್ಮಾರ್ಗ್ ಅಭಿವೃದ್ಧಿ ನಿಗಮದ ಸಿಇಒ ಜಿ. ಜೀಲಾನಿ ಜರ್ಗರ್ ಮಾತನಾಡಿ, ರಾಷ್ಟ್ರದ ಕಿರೀಟದಂತಿರುವ ಜಮ್ಮುಕಾಶ್ಮೀರದಲ್ಲಿ ಮತ್ತೆ ಪ್ರವಾಸೋದ್ಯಮ ತಲೆ ಎತ್ತಿದ್ದು, ಹಿಂದಿಗಿಂತ 30ರಷ್ಟು ಪ್ರವಾಸಿ ಸ್ಥಳಗಳನ್ನು ಹೆಚ್ಚಿಸಲಾಗುತ್ತಿದೆ. ಮಾರ್ಚ್ ತಿಂಗಳಿನಿಂದ ಜೂನ್ ವರೆಗೆ ಪ್ರವಾಸಿಗರು ಸುಂದರ ಅನುಭಗಳನ್ನು ಪಡೆಯಲು ಇಲ್ಲಿ ಅವಕಾಶ ದೊರೆಯುತ್ತದೆ ಎಂದರು.
ಈ ಪ್ರವಾಸೋದ್ಯಮ ಪ್ರದರ್ಶನ ಮಾರ್ಚ್ 6ರ ವರೆಗೆ ನಡೆಯಲಿದೆ. 12 ರಾಜ್ಯಗಳ 100ಕ್ಕೂ ಪ್ರದರ್ಶಕರು ಹಾಗೂ ಪ್ರಧಿನಿಧಿಗಳು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: 'ಹಿಂದಿನ ಕಾಮಗಾರಿಗಳ ಬಿಲ್ ಬಾಕಿ ಇದೆ, ಹೊಸ ನೀರಾವರಿ ಯೋಜನೆಗಳನ್ನ ಹೇಗೆ ಕೈಗೆತ್ತಿಕೊಳ್ಳುತ್ತಾರೆ?:MBP ಪ್ರಶ್ನೆ