ಬೆಂಗಳೂರು: ನೋಂದಾಯಿತ ವಾಹನಗಳ ಸ್ಕ್ರ್ಯಾಪಿಂಗ್ ಪಾಲಿಸಿಯಡಿ ವಿದ್ಯುತ್‌ಚಾಲಿತ ವಾಹನ ಖರೀದಿಸುವವರಿಗೆ ತೆರಿಗೆ ವಿನಾಯಿತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ನೋಂದಾಯಿತ ವಾಹನಗಳ ಸ್ಕ್ರ್ಯಾಪಿಂಗ್ ನೀತಿ 2022ರ ಕ್ರಮ ಸಂಖ್ಯೆ 9 ರ ಪಟ್ಟಿಯಲ್ಲಿ ತೆರಿಗೆಯನ್ನು ಪರಿಷ್ಕರಿಸಿ, ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಈ ಸಂಬಂಧ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಒಂದೆಡೆ ಹಳೆ ವಾಹನಗಳನ್ನು ಸ್ಕ್ರ್ಯಾಪ್ ಮಾಡುವುದನ್ನು ಉತ್ತೇಜಿಸುವುದರ ಜೊತೆಗೆ, ವಿದ್ಯುತ್ ಚಾಲಿತ ವಾಹನಗಳ ಖರೀದಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತೆರಿಗೆ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ. ಅದರಂತೆ ವಾಹನದ ಮಾಲೀಕ ತನ್ನ 15 ವರ್ಷ ಹಳೆಯ ವಾಹನವನ್ನು ಸ್ಕ್ರ್ಯಾಪ್ ಮಾಡಿ, ಬಳಿಕ ಇವಿ ವಾಹನ ಖರೀದಿಸಿದರೆ, ಅದಕ್ಕೆ ತೆರಿಗೆ ವಿನಾಯಿತಿ ಸಿಗಲಿದೆ.
ಇವಿಗೆ ತೆರಿಗೆ ವಿನಾಯಿತಿ ಹೇಗಿರಲಿದೆ?:
ಸಾರಿಗೇತರ ವಾಹನಗಳು:
ದ್ವಿಚಕ್ರ ವಾಹನ:
- ಶೋ ರೂಂ ಬೆಲೆ 1 ಲಕ್ಷ ರೂ.ವರೆಗಿನ ವಾಹನಕ್ಕೆ 1,000 ರೂ. ತೆರಿಗೆ ವಿನಾಯಿತಿ
- ಶೋ ರೂಂ ಬೆಲೆ 1-2 ಲಕ್ಷ ರೂ.ವರೆಗಿನ ವಾಹನಕ್ಕೆ 2,000 ರೂ. ವಿನಾಯಿತಿ
- ಶೋ ರೂಂ ಬೆಲೆ 2-3 ಲಕ್ಷ ರೂ.ವರೆಗಿನ ವಾಹನಕ್ಕೆ 3,000 ರೂ. ವಿನಾಯಿತಿ
- ಶೋ ರೂಂ ಬೆಲೆ 3-4 ಲಕ್ಷ ರೂ.ವರೆಗಿನ ವಾಹನಕ್ಕೆ 4,000 ರೂ. ವಿನಾಯಿತಿ
- ಶೋ ರೂಂ ಬೆಲೆ 4-5 ಲಕ್ಷ ರೂ.ವರೆಗಿನ ವಾಹನಕ್ಕೆ 5,000 ರೂ. ವಿನಾಯಿತಿ
ನಾಲ್ಕು ಚಕ್ರಗಳ ವಾಹನ:
- ಶೋ ರೂಂ ಬೆಲೆ 5 ಲಕ್ಷ ರೂ.ವರೆಗಿನ ವಾಹನಕ್ಕೆ 10,000 ರೂ. ತೆರಿಗೆ ವಿನಾಯಿತಿ
- ಶೋ ರೂಂ ಬೆಲೆ 5-10 ಲಕ್ಷ ವರೆಗಿನ ವಾಹನಕ್ಕೆ 20,000 ರೂ. ವಿನಾಯಿತಿ
- ಶೋ ರೂಂ ಬೆಲೆ 10-15 ಲಕ್ಷ ರೂ.ವರೆಗಿನ ವಾಹನಕ್ಕೆ 30,000 ರೂ. ವಿನಾಯಿತಿ
- ಶೋ ರೂಂ ಬೆಲೆ 15-20 ಲಕ್ಷ ವರೆಗಿನ ವಾಹನಕ್ಕೆ 40,000 ರೂ. ವಿನಾಯಿತಿ
- ಶೋ ರೂಂ ಬೆಲೆ 20 ಲಕ್ಷ ರೂ. ಮೇಲ್ಪಟ್ಟ ವಾಹನಕ್ಕೆ 50,000 ರೂ. ವಿನಾಯಿತಿ
ಇವಿ ಸಾರಿಗೆ ವಾಹನಗಳು:
- ಹೊಸ ನೋಂದಾಯಿತ ಸಾರಿಗೆ ವಾಹನಗಳಿಗೆ 8 ವರ್ಷದವರೆಗೆ ತ್ರೈಮಾಸಿಕವಾಗಿ ಅಥವಾ ವಾರ್ಷಿಕವಾಗಿ ಪಾವತಿಸುವ ತೆರಿಗೆ ಮೇಲೆ 10% ವಿನಾಯಿತಿ.
- ಹೊಸ ನೋಂದಾಯಿತ ಸಾರಿಗೆ ವಾಹನಗಳ ಲೈಫ್ ಟೈಂ ತೆರಿಗೆ ಮೇಲೆ 10% ವಿನಾಯಿತಿ.
- ಆಟೋ ರಿಕ್ಷಾಗಳ ಮೇಲೆ 500 ರೂ. ತೆರಿಗೆ ವಿನಾಯಿತಿ.
ಇದನ್ನೂ ಓದಿ: ಎಂಎಸ್ಎಂಇಗಳಿಗೆ ಸಾಲದ ಕೊರತೆ; ಸರ್ಕಾರ, ಹಣಕಾಸು ಸಂಸ್ಥೆಗಳಿಂದ ತಕ್ಷಣದ ಕ್ರಮ ಅಗತ್ಯ