ಬೆಂಗಳೂರು: ಬಜೆಟ್ ಘೋಷಣೆಯಂತೆ ರಾಜ್ಯದ ಏಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ Karnataka Institute of Technology (KIT)ಯಾಗಿ ಉನ್ನತೀಕರಿಸಲು ಹಾಗೂ ಯೋಜನಾ ಅನುಷ್ಠಾನಕ್ಕೆ ಕಾರ್ಯಪಡೆಯನ್ನು ರಚಿಸಿ ಸರ್ಕಾರ ಆದೇಶಿಸಿದೆ.
ಈ ಸಂಬಂಧ ಆದೇಶ ಹೊರಡಿಸಿರುವ ಸರ್ಕಾರ, ಮೊದಲ ಹಂತವಾಗಿ ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರಿನ ಎಸ್ಕೆಎಸ್ಜೆಐಟಿ (SKSJIT), ಹಾವೇರಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕೆ.ಆರ್.ಪೇಟೆಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ರಾಮನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ತಳಕಲ್ ಕೊಪ್ಪಳದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕಾರವಾರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಉನ್ನತೀಕರಣಕ್ಕಾಗಿ ಗುರುತಿಸಿದೆ. ಈ ಏಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಉನ್ನತೀಕರಣಕ್ಕೆ 94 ಕೋಟಿ ರೂ. ಅನುದಾನದ ಅಗತ್ಯತೆ ಇದೆ.
ಮೊದಲ ಹಂತವಾಗಿ ರಾಜ್ಯದಲ್ಲಿನ ಏಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು "Karnataka Institute of Technology" ಗಳನ್ನಾಗಿ ಉನ್ನತೀಕರಿಸಿ ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವ ಯೋಜನೆಗೆ ವಿವರವಾದ ಕಾರ್ಯವರದಿಯನ್ನು ಸಲ್ಲಿಸುವ ನಿಟ್ಟಿನಲ್ಲಿ ಶೈಕ್ಷಣಿಕ ತಜ್ಞರ ಕಾರ್ಯಪಡೆ ರಚಿಸಲಾಗಿದೆ. ಬೆಂಗಳೂರು ಐಐಐಟಿಯ ಸಂಸ್ಥಾಪಕ ನಿರ್ದೇಶಕ ಸಡಗೋಪನ್ ನೇತೃತ್ವದಲ್ಲಿ ಏಳು ಸದಸ್ಯರ ಕಾರ್ಯಪಡೆ ರಚನೆ ಮಾಡಲಾಗಿದೆ.
ಕಾರ್ಯಪಡೆಯು ಗುರುತಿಸಲ್ಪಟ್ಟ 7 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಕರ್ನಾಟಕ ತಾಂತ್ರಿಕ ಸಂಸ್ಥೆಗಳಾಗಿ ಉನ್ನತೀಕರಿಸುವ ವಿಧಾನಗಳ ಬಗ್ಗೆ ಮಾರ್ಗದರ್ಶನ ನೀಡಲಿದೆ. 7 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಪೈಕಿ ಪ್ರತಿ ಸಂಸ್ಥೆಯಿಂದ ಪ್ರಸ್ತುತ ಮತ್ತು ಉದ್ಯೋಗಾವಕಾಶಗಳ ಆಧಾರದ ಮೇಲೆ ಎರಡು ವಿಭಾಗಗಳನ್ನು ಗುರುತಿಸಿ, ಅವುಗಳನ್ನು ಮೊದಲಿನ ಹಂತದಲ್ಲಿ ಉನ್ನತೀಕರಿಸಲು ಪ್ರಸ್ತಾವನೆ ಸಲ್ಲಿಸಬೇಕು. ಆಯ್ದ ಸಂಸ್ಥೆಗಳಲ್ಲಿ ಉನ್ನತೀಕರಿಸಲು ಆಯ್ಕೆ ಮಾಡಲಾದ ವಿಭಾಗಗಳಲ್ಲಿನ ಮೂಲಭೂತ ಸೌಕರ್ಯ, ಮಾನವ ಸಂಪನ್ಮೂಲ, ಉಪಕರಣಗಳ ಹಾಗೂ ಇತರ ಅವಶ್ಯಕತೆಗಳ ಅನುಗುಣವಾಗಿ ವಿವರವಾದ ಕಾರ್ಯತಂತ್ರವನ್ನು ಸೂಚಿಸಬೇಕಿದೆ.
ಅಲ್ಲದೆ, ಕಾರ್ಯಪಡೆಯು ಆಯ್ಕೆ ಮಾಡಲಾದ ವಿಭಾಗಗಳನ್ನು ಉನ್ನತೀಕರಿಸಲು ರೂಪಿಸಲಾದ ಕಾರ್ಯತಂತ್ರವನ್ನು ಮೌಲ್ಯಮಾಪನ ಮಾಡಿ ಅನುಷ್ಠಾನಗೊಳಿಸಲು ಮಾರ್ಗದರ್ಶನ ನೀಡಬೇಕು. ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು Karnataka Institute of Technologyಗಳನ್ನಾಗಿ ಉನ್ನತೀಕರಿಸಲು ಉದ್ದೇಶಿಸಿರುವ ಪ್ರತಿಯೊಂದು ಕೆಐಟಿ(KIT) ಸಂಬಂಧಿಸಿದಂತೆ ಎರಡು ತಿಂಗಳೊಳಗಾಗಿ ವಿವರವಾದ ಯೋಜನಾ ವರದಿ(DPR) ಸಲ್ಲಿಸಬೇಕು.
ಇದನ್ನೂ ಓದಿ: 12 ನಗರಾಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರ ನಾಮನಿರ್ದೇಶನ ರದ್ದು