ಬೆಂಗಳೂರು: ಮಾಸ್ಕ್ ಹಾಕದವರಿಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸುವ ಸರ್ಕಾರದ ಆದೇಶ ಸಾರ್ವಜನಿಕ ವಲಯಲ್ಲಿ ತೀವ್ರ ವಿರೋಧಕ್ಕೆ ಕಾರಣವಾದ ಬೆನ್ನೆಲ್ಲೆ, ಇದೀಗ ಮತ್ತೊಂದು ಆದೇಶ ಚರ್ಚೆಗೆ ಕಾರಣವಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಮ ಪಾಲಿಸದವರಿಂದ ದಂಡ ವಸೂಲಿ ಮಾಡಲು ನೇಮಿಸಲಾಗಿರುವ ಮಾರ್ಷಲ್ಗಳಿಗೆ ದಿನಕ್ಕೆ ಇಂತಿಷ್ಟು ಕೇಸ್ ಹಾಕಲೇಬೇಕು, ದಂಡ ವಸೂಲಿ ಮಾಡಲೇಬೇಕು ಎಂದು ಅಧಿಕಾರಿಗಳು ಟಾರ್ಗೆಟ್ ಫಿಕ್ಸ್ ಮಾಡಿದ್ದಾರೆ. ಒಂದು ವಿಧಾನಸಭಾ ಕ್ಷೇತ್ರದೊಳಗೆ ದಿನಕ್ಕೆ ಕನಿಷ್ಠ 20 ಕೇಸ್ ಹಾಕಲೇಬೇಕು ಮತ್ತು ದಂಡ ವಸೂಲಿ ಮಾಡಲೇಬೇಕೆಂದು ಮಾರ್ಷಲ್ಗಳಿಗೆ ಟಾರ್ಗೆಟ್ ಫಿಕ್ಸ್ ಮಾಡಲಾಗಿದೆ. ಟಾರ್ಗೆಟ್ ತಲುಪಲು ವಿಫಲವಾಗಿರುವ ಮಾರ್ಷಲ್ಗಳಿಗೆ ನೋಟಿಸ್ ಕೂಡ ಜಾರಿ ಮಾಡಲಾಗಿದೆ. ಸೂಚನೆ ಕೊಟ್ಟರೂ ಪದೇ ಪದೆ ನೀವು ಟಾರ್ಗೆಟ್ ತಲುಪುವಲ್ಲಿ ವಿಫಲರಾಗಿದ್ದೀರಿ. ನಿಮ್ಮ ಮೇಲೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಕೋವಿಡ್ ವಿಭಾಗೀಯ ಸಂಯೋಜನಾಧಿಕಾರಿ ಮನೀಶ್ ಮೌದ್ಗಿಲ್ ನೋಟಿಸ್ ನೀಡಿದ್ದಾರೆ. ಅಧಿಕಾರಿಗಳ ಈ ನಡೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.

ಬಿಬಿಎಂಪಿಯಲ್ಲಿ ಪ್ರತಿ ವಾರ್ಡ್ಗೆ ಒಬ್ಬ ಮಾರ್ಷಲ್ ಇದ್ದಾರೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿ 6 - 7 ವಾರ್ಡ್ಗಳು ಬರುತ್ತವೆ. ಮನೀಶ್ ಮೌದ್ಗಿಲ್ ಅವರ ಪ್ರಕಾರ ಒಂದು ವಿಧಾನಸಭಾ ಕ್ಷೇತ್ರದಲ್ಲಿ ದಿನಕ್ಕೆ 120 ರಿಂದ 140 ಕೇಸ್ ಹಾಕಬೇಕಾಗುತ್ತೆ. ಮಾಸ್ಕ್ ಹಾಕದವರಿಗೆ 1 ಸಾವಿರವರೆಗೆ ದಂಡ ಕಟ್ಟುವಂತೆ ಈ ಹಿಂದೆ ನೀಡಿದ್ದ ಆದೇಶ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಆ ಬಳಿಕ ಸರ್ಕಾರದ ದಂಡದ ಮೊತ್ತವನ್ನು 250 ರೂ.ಗೆ ಇಳಿಸಿತ್ತು. ಇದೀಗ ಕೇಸ್ ಹಾಕುವುದರಲ್ಲಿ ಅಧಿಕಾರಿಗಳು ಟಾರ್ಗೆಟ್ ಫಿಕ್ಸ್ ಮಾಡಿರುವುದು ಮತ್ತೆ ವಿರೋಧಕ್ಕೆ ಕಾರಣವಾಗಿದೆ.