ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ಜೆಡಿಎಸ್‌ಗೆ ಇನ್ನೊಂದು ಹೊಡೆತ ನೀಡಿದ್ದು, ಜೆಡಿಎಸ್ ಸಾರಿಗೆ ವಿಭಾಗದ ಅಧ್ಯಕ್ಷರಾಗಿದ್ದ ತನ್ವೀರ್ ಇಂದು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಸಮಾರಂಭದಲ್ಲಿ ತನ್ವೀರ್ ಜೊತೆ ರಾಜ್ಯದ ಓಲಾ, ಉಬರ್ ಹಾಗೂ ಟ್ಯಾಕ್ಸಿ ಡ್ರೈವರ್ ಗಳು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಇವರನ್ನು ಬರಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಇಂದಿನಿಂದ ನೂತನ ಚಾಲಕರ ಘಟಕ ಕೂಡ ಆರಂಭಿಸುತ್ತಿದ್ದು, ಇದಕ್ಕೆ ತನ್ವೀರ್ ಮುಖ್ಯಸ್ಥರಾಗಿರಲಿದ್ದಾರೆ.
ಸಮಾರಂಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇನ್ಮುಂದೆ ರಾಜ್ಯ, ಜಿಲ್ಲೆ ಹಾಗೂ ತಾಲೂಕಿನ ಮಟ್ಟದಲ್ಲಿ ಸಾರಿಗೆ ವಿಭಾಗ ರಚಿಸುತ್ತೇವೆ. ಚುನಾವಣೆ ಇರೋದ್ರಿಂದ ನಾನು ಈಗ ಕೆಲವು ಘೋಷಣೆಗಳನ್ನು ಮಾಡುವುದಿಲ್ಲ. ಆದರೆ, ಚಾಲಕರ ರಕ್ಷಣೆಗೆ ನಾವಿದ್ದೇವೆ ಎಂದರು.
ರಾಜ್ಯದಲ್ಲಿ 32 ಲಕ್ಷ ಚಾಲಕರಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಎದುರಾಗಿದ್ದ ಸಂಕಷ್ಟ ನಿರ್ವಹಣೆಗೆ ಸರ್ಕಾರ 5 ಸಾವಿರ ರೂಪಾಯಿ ಪರಿಹಾರ ಹಣ ಘೋಷಿಸಿತ್ತು. ಇದರಿಂದ 7.75 ಲಕ್ಷ ಚಾಲಕರಿಗೆ ಅನುಕೂಲವಾಗಿದೆ. ಆದರೆ, ಉಳಿದ ಚಾಲಕರು ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಡಿಕೆಶಿ ಮುಖ್ಯಮಂತ್ರಿ ಎಂಬ ಹೇಳಿಕೆ ವಿಚಾರವಾಗಿ ಅವರು ಮಾತನಾಡಿ, ಅವರು ಅವರ ಆಸೆಯನ್ನ ವ್ಯಕ್ತಪಡಿಸುತ್ತಿರಬಹುದು. ನಾನು ಸಾಮೂಹಿಕ ನಾಯಕತ್ವಕ್ಕೆ ಬದ್ಧ. ಮೊದಲು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಆ ನಂತರ ನಮ್ಮ ನಾಯಕರು ತೀರ್ಮಾನ ಮಾಡಬೇಕು. ನಮ್ಮ ನಾಯಕರ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.