ಬೆಂಗಳೂರು: ಆಳಂದ ಕ್ಷೇತ್ರದ ಶಾಸಕ ಬಿ ಆರ್ ಪಾಟೀಲ್ ಅವರ ಜೊತೆ ಮಾತಾಡಿದ್ದೇನೆ. ಅವರಿಗೆ ಯಾವುದೇ ರೀತಿಯ ಅಸಮಾಧಾನ ಇಲ್ಲ. ಎಲ್ಲವನ್ನೂ ಮಾತನಾಡಿ ಮುಗಿಸಿದ್ದೇನೆ. ಅವರನ್ನು ಸಮಾಧಾನ ಮಾಡಿದ್ದೇನೆ. ಅವರು ಬೆಳಗಾವಿ ಅಧಿವೇಶನಕ್ಕೆ ಬರಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಂತ ಶ್ರೇಷ್ಠ ಕನಕದಾಸರ ಜಯಂತಿಯ ಅಂಗವಾಗಿ ಶಾಸಕರ ಭವನದ ಆವರಣದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಬಿ. ಆರ್. ಪಾಟೀಲ್ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದರು.
ಇನ್ನು, ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಸಿಗದೆ ಮಗು ಸಾವನ್ನಪ್ಪಿದ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಅದರ ಬಗ್ಗೆ ಇವತ್ತು ನಾನು ಪತ್ರಿಕೆಯಲ್ಲಿ ನೋಡಿದೆ. ಅಲ್ಲಿನ ಆಸ್ಪತ್ರೆಯ ನಿರ್ದೇಶಕರನ್ನು ಕರೆದು ಇದರ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿದರು.
ಕನಕದಾಸರ ಪ್ರತಿಮೆಗೆ ಪುಷ್ಪಾರ್ಚನೆ: ಸಂತ ಶ್ರೇಷ್ಠ ಕನಕದಾಸರ ಜಯಂತಿಯ ಅಂಗವಾಗಿ ಶಾಸಕರ ಭವನದ ಆವರಣದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಿಎಂ ಸಿದ್ದರಾಮಯ್ಯ ಪುಷ್ಪ ನಮನ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅವರು, ಕನಕದಾಸರು ಶ್ರೇಷ್ಠ ದಾಸರು. ದಾಸ ಸಾಹಿತ್ಯವನ್ನ ಜನರಿಗೆ ತಲುಪಿಸಿದ್ದರು. ಸರ್ಕಾರ ಅವರ ಕೊಡುಗೆಯನ್ನ ಸ್ಮರಿಸುತ್ತೆ. ನಾಡಿನ ಎಲ್ಲಾ ಜನರಿಗೆ ಕನಕಜಯಂತಿಯ ಶುಭಾಶಯವನ್ನು ಸಿಎಂ ತಿಳಿಸಿದರು.
ಇದನ್ನೂ ಓದಿ: 'ನನ್ನೊಂದಿಗೆ ಚರ್ಚಿಸಿ ಸಿಎಂ ಸಮಸ್ಯೆ ಬಗೆಹರಿಸಿದ್ದಾರೆ, ಅಧಿವೇಶನದಲ್ಲಿ ಭಾಗವಹಿಸುತ್ತೇನೆ'
ಮುಖ್ಯಮಂತ್ರಿಗೆ ಪತ್ರ ಬರೆದಿದ್ದ ಬಿ ಆರ್ ಪಾಟೀಲ್: ಸಚಿವ ಕೃಷ್ಣ ಬೈರೇಗೌಡ ಅವರು ತಮ್ಮ ವಿರುದ್ಧ ಅನುಮಾನ ಬರುವಂತೆ ಮಾತನಾಡಿದ್ದಾರೆ ಎಂದು ಆರೋಪಿಸಿ ಶಾಸಕ ಬಿ ಆರ್ ಪಾಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇತ್ತೀಚೆಗೆ ಪತ್ರ ಬರೆದಿದ್ದರು. ಪತ್ರದಲ್ಲಿ ಲಂಚ ಪಡೆದು ಕೆಆರ್ಡಿಎಲ್ ಕಾಮಗಾರಿಗಳನ್ನು ನೀಡಿದ್ದೇನೆ ಎಂಬ ಆರೋಪ ನನ್ನ ಮೇಲೆ ಕೇಳಿ ಬಂದಿದೆ. ಆ ಆರೋಪಗಳನ್ನು ಹೊತ್ತುಕೊಂಡು ನಾನು ಅಧಿವೇಶನಕ್ಕೆ ಬರುವುದು ಸರಿಯಲ್ಲ. ಹಾಗೂ ನಾನು ಬಂದರೆ ಆ ಆರೋಪಗಳನ್ನು ಒಪ್ಪಿಕೊಂಡಂತಾಗುತ್ತದೆ. ಆದ್ದರಿಂದ ತನಿಖೆ ನಡೆಸಿ, ಸತ್ಯಾಸತ್ಯತೆ ಹೊರತನ್ನಿ. ನನ್ನ ಮೇಲಿನ ಆರೋಪ ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧವಾಗಿದ್ದೇನೆ ಎಂದು ಪತ್ರದಲ್ಲಿ ಬಿ ಆರ್ ಪಾಟೀಲ್ ಬರೆದಿದ್ದರು.
ಬಿ ಆರ್ ಪಾಟೀಲ್ ಜೊತೆ ಸಿಎಂ ಮಾತುಕತೆ: ಈ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ ಆರ್ ಪಾಟೀಲ್ ಅವರನ್ನು ರೇಸ್ ಕೋರ್ಸ್ ರಸ್ತೆಯಲ್ಲಿರುವ ಶಕ್ತಿ ಭವನಕ್ಕೆ ಬುಧವಾರ ಕರೆಯಿಸಿಕೊಂಡು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತನಾಡಿ ಸಮಸ್ಯೆ ಪರಿಹರಿಸಿದ್ದಾರೆ. ಮಾತುಕತೆ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಶಾಸಕ ಬಿ ಆರ್ ಪಾಟೀಲ್, ಸಿಎಂ ಫೋನ್ ಮಾಡಿ ಕರೆಸಿಕೊಂಡು ಮಾತನಾಡಿದ್ದಾರೆ. ನನ್ನ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿದ್ದಾರೆ. ಮತ್ತೆ ಯಾವುದೇ ಸಮಸ್ಯೆ ಆಗುವುದಿಲ್ಲ. ನನಗೆ ಸಿದ್ದರಾಮಯ್ಯ ಅವರ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದರು.