ಬೆಂಗಳೂರು: ಸಿದ್ದರಾಮಯ್ಯ ನನ್ನನ್ನು ದಡ್ಡ ಅಂತಾರೆ. ಆದರೆ ಸಿದ್ದರಾಮಯ್ಯ ಶತದಡ್ಡ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನಮ್ಮ ಆತ್ಮೀಯ ಸ್ನೇಹಿತರು. ನನ್ನನ್ನು ಅವರು ದಡ್ಡ ಅಂತಾರೆ. ಆದರೆ, ಸಿದ್ದು ಶತಶತ ದಡ್ಡ. ಅವರ ಪ್ರಶ್ನೆಗೆ ನಾನು ಏನು ಉತ್ತರ ಕೊಡಲಿ. ನಾನೇನಾದರು ಪ್ರಶ್ನೆ ಮಾಡಿದರೆ, ನನ್ನನ್ನು ತಲೆಕೆಟ್ಟವನು, ದಡ್ಡ ಅಂತಾರೆ. ಇಂಥ ಶತದಡ್ಡ ನನ್ನನ್ನು ಪ್ರಶ್ನೆ ಮಾಡುತ್ತಾನೆ ಎಂದು ಏಕವಚನದಲ್ಲಿ ಕಿಡಿಕಾರಿದರು.
ಅವರು ಜೆಡಿಎಸ್ನಿಂದ ಕಾಂಗ್ರೆಸ್ಗೆ ಹೋಗಿರುವುದು ಆಪರೇಷನ್ ಅಲ್ವಾ? ಅವರು ಅಧಿಕಾರದ ಆಸೆಗೆ ಹೋಗಿದ್ದಲ್ವಾ?. ಜೆಡಿಎಸ್ಗೆ ದ್ರೋಹ ಮಾಡಿದ ಕಾರಣ ಅವರನ್ನು ಆ ಪಕ್ಷದಿಂದ ಕಿತ್ತು ಹಾಕಿದರು. ಹಾಗಾಗಿ ಸಿದ್ದರಾಮಯ್ಯ ಪಕ್ಷದ್ರೋಹಿ ಆಗಿದ್ದಾರೆ. ಆಪರೇಷನ್ ಜನಕನೇ ಸಿದ್ದರಾಮಯ್ಯ. ಆವಾಗ ನೀವು ಎಷ್ಟು ದುಡ್ಡು ತಗೊಂಡಿದ್ದೀರಿ ಎಂದು ಪ್ರಶ್ನಿಸಿದರು.
ನಿನಗೆ ಎಷ್ಟು ತಾಯಂದಿರು?
ನಮಗೆ ಪಕ್ಷ ತಾಯಿ ಇದ್ದಂತೆ. ನೀವು ಎಷ್ಟು ಪಕ್ಷ ಬದಾಯಿಸಿದ್ದೀರಾ. ನಿಮಗೆ ಜೆಡಿಎಸ್ ಪಕ್ಷ ತಾಯಿನಾ?, ಕಾಂಗ್ರೆಸ್ ಪಕ್ಷ ತಾಯಿನಾ? ನಿನಗೆ ಎಷ್ಟು ತಾಯಂದಿರು ಎಂದು ಖಾರವಾಗಿ ಪ್ರಶ್ನಿಸಿದರು.
ಸಿದ್ದರಾಮಯ್ಯ ಹೋದೆಲ್ಲೆಲ್ಲಾ ಕುರುಬರು ಅಂತಾರೆ. ಅವರ ಜತೆ ಕುರುಬ ಸ್ವಾಮಿ ಬಿಡಿ, ಬೇರೆ ಧರ್ಮದ ಯಾವ ಸ್ವಾಮಿಗಳೂ ಇಲ್ಲ. ದಲಿತ ಸ್ವಾಮಿ, ಅಲ್ಪಸಂಖ್ಯಾತ ಸ್ವಾಮಿಗಳು, ಹಿಂದುಳಿದ ಸ್ವಾಮಿಗಳು ಅವರ ಪರವಾಗಿಲ್ಲ. ನೀವು ಜಾತಿವಾದಿ. ನಾವು ರಾಷ್ಟ್ರವಾದಿಗಳು. ಅವರು ಸಿಎಂ ಆಗಿದ್ದೂ, ಬಳಿಕ ಸೋಲಲು ಕಾರಣ ಇದೇ ಹಗುರವಾದ ಮಾತು ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬರ ಪೀಡಿತ ಪ್ರದೇಶಗಳಿಗೆ ದುಡ್ಡು ಕೊಡಲೇ ಇಲ್ಲ. ಇನ್ನು ಮೈತ್ರಿ ಸರ್ಕಾರ ಇದ್ದಾಗ ನೆರೆ ಪ್ರದೇಶಗಳಿಗೆ ಪ್ರಮುಖರು ಒಟ್ಟಿಗೆ ಪ್ರವಾಸನೂ ಹೋಗಿಲ್ಲ. ಉಸ್ತುವಾರಿ ಸಚಿವರು ಹೋಗಿಲ್ಲ. ಬಳಿಕ ಸರ್ಕಾರ ಬಿದ್ದು ಹೋಯಿತೇ ಹೊರತು ಪ್ರವಾಸ ಮಾಡಿಲ್ಲ ಎಂದು ಕಿಡಿಕಾರಿದರು.
ಆದರೆ ನಾವು ಪ್ರಮಾಣ ವಚನ ಸ್ವೀಕಾರದ ಮರು ದಿನವೇ ಎಲ್ಲ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೆವು. ಸಿಎಂ ಬಿಎಸ್ವೈ ಪ್ರಧಾನಿಯವರನ್ನು ಭೇಟಿ ಮಾಡಿ ಹೆಚ್ಚಿನ ಅನುದಾನ ನೀಡಲು ಮನವಿಯನ್ನೂ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.