ಬೆಂಗಳೂರು: ಫ್ರೀಡಂಪಾರ್ಕ್ನಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಸಮಾವೇಶ ನಡೆಸುತ್ತಿದ್ದು, ಪ್ರತಿಭಟನೆ ವೇಳೆ ಪೌರತ್ವ ಕಾಯ್ದೆ, ಎನ್ಆರ್ಸಿ ಬಗ್ಗೆ ಕೆಲ ಕಾರ್ಮಿಕ ಸಂಘಟನೆಗಳ ಮುಖಂಡರು ಸ್ಟೇಜ್ನಲ್ಲಿ ಧ್ವನಿ ಎತ್ತಿ ಸಮಸ್ಯೆಗೆ ಕಾರಣರಾದರು.
ಈ ವೇಳೆ, ಕೆಳಗಡೆ ಕುಳಿತ ಕೆಲ ಕಾರ್ಮಿಕರು ಹಾಗೂ ಕಿರ್ಲೋಸ್ಕರ್ ಸಂಸ್ಥೆಯ ಕಾರ್ಮಿಕರು CAA ಹಾಗೂ NRC ಬಗ್ಗೆ ಧ್ವನಿ ಎತ್ತಿದ್ದಕ್ಕೆ ಅಸಮಾಧಾನಗೊಂಡು ಕಾರ್ಮಿಕರ ಬೇಡಿಕೆಗೂ ಸಿಎಎ ಹಾಗೂ ಎನ್ಆರ್ಸಿ ಗೂ ಸಂಬಂಧವಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಬಳಿಕ ಕಾರ್ಮಿಕ ಸಂಘಟನೆ ಮುಖಂಡರುಗಳ ನಡುವೆ ನೂಕಾಟ ತಳ್ಳಾಟ ನಡೆಸಿ, ಹೊಡೆದಾಟ ಕೂಡಾ ನಡೆಯಿತು. ಪರಿಣಾಮ ಪೊಲೀಸರು ಮಧ್ಯಸ್ತಿಕೆ ವಹಿಸಿ ಸಂಘರ್ಷವನ್ನು ತಿಳಿಗೊಳಿಸಿದರು. ಅಲ್ಲದೇ ಸಮಸ್ಯೆಗೆ ಕಾರಣರಾದ ಕೆಲವರನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ಇನ್ನೂ ಕಾರ್ಮಿಕ ಸಂಘಟನೆಗಳ ಜೊತೆ, ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರುದ್ಧ ಕೆನರಾ ಬ್ಯಾಂಕ್ ಸ್ಟಾಫ್ ಫೆಡರೇಶನ್ ಕೂಡಾ ಪ್ರತಿಭಟನೆ ನಡೆಸಿತು. ಟೌನ್ ಹಾಲ್ ಮುಂಭಾಗದಲ್ಲಿರುವ ಕೆನರಾ ಬ್ಯಾಂಕ್ ಆವರಣದಲ್ಲಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಕೆನರಾ ಬ್ಯಾಂಕ್ ಸ್ಟಾಫ್ ಫೆಡರೇಶನ್ನ ಜನರಲ್ ಸಕ್ರೆಟರಿ ಜಿ.ರಾಧಾಕೃಷ್ಣ ಮಾತನಾಡಿ, ಬ್ಯಾಂಕ್ಗಳ ವಿಲೀನದಿಂದ ಸಾಕಷ್ಟು ನೌಕರರು ಕೆಲಸ ಕಳೆದುಕೊಳ್ಳುತ್ತಾರೆ. ಹಳ್ಳಿಗಳಲ್ಲಿ, ಜನಸಾಮಾನ್ಯರಿಗೆ ಬ್ಯಾಂಕಿಂಗ್ ಸೌಲಭ್ಯಗಳೂ ಸಿಗೋದಿಲ್ಲ. ಕೇಂದ್ರ ಸರ್ಕಾರ ಈ ಬ್ಯಾಂಕ್ಗಳ ವಿಲೀನ ಹಾಗೂ ಖಾಸಗೀಕರಣ ನೀತಿಯನ್ನು ಕೈಬಿಡಬೇಕೆಂದು ಆಗ್ರಹಿಸಿದರು.
ಇನ್ನೂ ಬ್ಯಾಂಕ್ ಮುಳುಗಡೆಯಾದ್ರೆ ಜನರ ಠೇವಣಿ ಹಣವನ್ನೂ ಬ್ಯಾಂಕ್ ನಷ್ಟಕ್ಕೆ ವಜಾ ಮಾಡುವ ಎಫ್ಎಸ್ಡಿಆರ್ ನಿಯಮವನ್ನೂ ವಿರೋಧಿಸುತ್ತೇವೆ ಎಂದರು.