ಬೆಂಗಳೂರು: ತಳವಾರ, ಪರಿವಾರ ಹಾಗೂ ಕಾರವಾರ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯಲ್ಲಿರುವ ಸಿದ್ಧಿ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸಲು ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಆದೇಶಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಗೆಜೆಟ್ ಅಧಿಸೂಚನೆಯ ಅನುಸಾರ ರಾಜ್ಯದಲ್ಲಿಯೂ ಅಧಿಸೂಚನೆ ಹೊರಡಿಸಲು ಆದೇಶಿಸಲಾಗಿದೆ ಎಂದು ತಿಳಿಸಿದರು.
ಕುಲಶಾಸ್ತ್ರಿ ಅಧ್ಯಯನದಂತೆ ಪರಿವಾರ ಮತ್ತು ತಳವಾರ ಜಾತಿಗಳು ನಾಯಕ ಮತ್ತು ನಾಯಿಕದ ಪರ್ಯಾಯವಾಗಿವೆ. ಈ ಪ್ರಸ್ತಾವನೆಯು ಕಳೆದ ಹಲವಾರು ದಶಕಗಳಿಂದ ಬೇಡಿಕೆಯಲ್ಲಿತ್ತು. ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಎಲ್ಲಾ ಪೂರಕ ಮಾಹಿತಿ ಸಲ್ಲಿಸಲಾಗಿತ್ತು ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಈ ಪ್ರಸ್ತಾವನೆಯನ್ನು ಸಂಸತ್ನಲ್ಲಿ ಅಂಗೀಕರಿಸಿ, ಗೆಜೆಟ್ ಅಧಿಸೂಚನೆ ಹೊರಡಿಸಿದ ಆಧಾರದಡಿ ರಾಜ್ಯ ಸರ್ಕಾರದಿಂದ ಗೆಜೆಟ್ ಪ್ರಕಟಣೆ ಹೊರಡಿಸುವಂತೆ ಆದೇಶಿಸಲಾಗಿದೆ. ಈ ಅಧಿಸೂಚನೆಯಂತೆ ಈ ಸಮುದಾಯದವರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರ ನೀಡಲು ಅವಕಾಶವಿರುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸಮಾಜ ಕಲ್ಯಾಣ ಇಲಾಖೆಯ ಪರವಾಗಿ ಅಭಿನಂದಿಸುವುದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.