ಬೆಂಗಳೂರು : ಕೋವಿಡ್-19 ಸೋಂಕಿನ ಹಿನ್ನೆಲೆ ಪ್ರತಿಕೂಲ ಪರಿಸ್ಥಿತಿ ಇದ್ದಾಗಲೂ ತೆರಿಗೆ ಸಂಗ್ರಹ ತೃಪ್ತಿಕರವಾಗಿದೆ. ಕೋವಿಡ್ ನಿಯಂತ್ರಣ ನಿರ್ಬಂಧಗಳನ್ನು ಹಿಂಪಡೆದ ನಂತರ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಹೊಂದಿರುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತೆರಿಗೆ ಸೋರಿಕೆ ತಡೆಗೆ ಕ್ರಮಕೈಗೊಳ್ಳಲು ಸಿಎಂ ಸೂಚನೆ ನೀಡಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ರಾಜ್ಯದ ತೆರಿಗೆ ಸಂಗ್ರಹಣಾ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಅಬಕಾರಿ ಇಲಾಖೆಗಳ ತೆರಿಗೆ ಸಂಗ್ರಹ ಪ್ರಗತಿಯ ಕುರಿತು ಮಾಹಿತಿ ಪಡೆದುಕೊಂಡರು.
ವಾಣಿಜ್ಯ ತೆರಿಗೆ : ರಾಜ್ಯದಲ್ಲಿ 2020-21ರಲ್ಲಿ 82,443 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಗೆ ಎದುರಾಗಿ 82,462 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಇದರಲ್ಲಿ 65,659 ಕೋಟಿ ರೂ. ಜಿಎಸ್ಟಿ ಮೂಲಕ, ಪೆಟ್ರೋಲ್/ಡೀಸೆಲ್ ಮೇಲಿನ ತೆರಿಗೆ ಮೂಲಕ 15,861 ಕೋಟಿ ರೂ. ಹಾಗೂ ವೃತ್ತಿ ತೆರಿಗೆ ಮೂಲಕ 942 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಪ್ರಸ್ತುತ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಒಟ್ಟು 11,409 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ವಾರ್ಷಿಕ ಗುರಿಯ ಶೇ. 14.92ರಷ್ಟು ಸಾಧನೆಯಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.
ಜಿಎಸ್ಟಿ ಸಂಗ್ರಹದಲ್ಲಿ ಕರ್ನಾಟಕವು ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಸ್ಟೇಟ್ ಜಿಎಸ್ಟಿ ಸಂಗ್ರಹದಲ್ಲಿಯೂ ದ್ವಿತೀಯ ಸ್ಥಾನದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು. 2022ಕ್ಕೆ ಜಿಎಸ್ಟಿ ಪರಿಹಾರ ವ್ಯವಸ್ಥೆ ಅಂತ್ಯವಾಗಲಿದೆ. ಇದನ್ನು ಇನ್ನಷ್ಟು ವರ್ಷಗಳ ಕಾಲ ವಿಸ್ತರಿಸುವಂತೆ ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಅಬಕಾರಿ ಇಲಾಖೆ : ರಾಜ್ಯದಲ್ಲಿ 2021-22ನೇ ಸಾಲಿಗೆ ಅಬಕಾರಿ ಇಲಾಖೆಯ ತೆರಿಗೆ ಸಂಗ್ರಹ ಗುರಿ 24,580 ಕೋಟಿ ರೂ. ಗಳಾಗಿದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಒಟ್ಟು 4284.05 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಕಳೆದ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಿಗೆ ಹೋಲಿಸಿದರೆ, ಈ ವರ್ಷ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ. 2020-21ರಲ್ಲಿ 23,332.10 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಬೆಳವಣಿಗೆ ದರ ಶೇ. 8.10 ರಷ್ಟಿದೆ ಎಂದು ಅಧಿಕಾರಿಗಳು ವಿವರಿಸಿದರು. ಎಲ್ಲ ಮಾಹಿತಿ ಪಡೆದ ಸಿಎಂ ಯಡಿಯೂರಪ್ಪ, ತೆರಿಗೆ ಸೋರಿಕೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ ಎಸ್ ಎನ್ ಪ್ರಸಾದ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ ವಿ ರಮಣರೆಡ್ಡಿ, ಆರ್ಥಿಕ ಇಲಾಖೆ ಕಾರ್ಯದರ್ಶಿಗಳಾದ ಏಕ್ ರೂಪ್ ಕೌರ್ ಹಾಗೂ ಪಿ ಸಿ ಜಾಫರ್, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಎಂ ಎಸ್ ಶ್ರೀಕರ್, ಅಬಕಾರಿ ಇಲಾಖೆ ಆಯುಕ್ತ ಬಿ.ಲೋಕೇಶ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.