ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಮಂಡ್ಯ ರೆಬಲ್ ಕೈ ನಾಯಕರನ್ನು ಪಕ್ಷದಿಂದ ಉಚ್ಛಾಟನೆಗೊಳಿಸುವಂತೆ ಆಗ್ರಹಿಸಿ ಕೆಪಿಸಿಸಿ ಕಾನೂನು ಮತ್ತು ಮಾನವಹಕ್ಕು ವಿಭಾಗದ ಅಧ್ಯಕ್ಷ ಸಿ. ಎಂ. ಧನಂಜಯ್ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ಗೆ ಪತ್ರ ಬರೆದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಕೆ ಬಿ ಚಂದ್ರಶೇಖರ್, ಗಣಿಗ ರವಿ, ರಮೇಶ್ ಬಂಡಿಸಿದ್ದೇಗೌಡ ಪಕ್ಷದ್ರೋಹ ಮತ್ತು ಮೈತ್ರಿ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕೆಂದು ಪತ್ರ ಮುಖೇನ ಮನವಿ ಮಾಡಿದ್ದಾರೆ.
ರೆಬಲ್ ಕೈ ನಾಯಕರು ಶಿಸ್ತು ಉಲ್ಲಂಘಿಸಿ, ಪಕ್ಷಕ್ಕೆ ಕಳಂಕ ತರುವ ವರ್ತನೆ ಪ್ರದರ್ಶಿಸಿದ್ದಾರೆ. ವೈಯಕ್ತಿಕ ಪ್ರತಿಷ್ಠೆ, ರಾಜಕೀಯಕ್ಕಾಗಿ ಪಕ್ಷದ ತತ್ವ ಸಿದ್ಧಾಂತಗಳಿಗೆ ಚ್ಯುತಿ ತಂದಿದ್ದಾರೆ. ಪಕ್ಷದ ಇಂತಹ ದುರ್ವರ್ತನೆಗಳನ್ನು ಕ್ಷಮಿಸುತ್ತಾ ಹೋದರೆ, ಪಕ್ಷ ವಿರೋಧಿ ಚಟುವಟಿಕೆ ನಡೆಸುವವರಿಗೆ ಕಡಿವಾಣ ಇಲ್ಲದಂತಾಗುತ್ತದೆ. ಇವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಉಳಿಯುವ ನೈತಿಕತೆ ಇಲ್ಲ. ಅವರಾಗೇ ರಾಜೀನಾಮೆ ಕೊಟ್ಟು ಹೋಗಬೇಕು. ಇಲ್ಲಾ ಪಕ್ಷವೇ ರೆಬಲ್ ನಾಯಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಧನಂಜಯ್ ಒತ್ತಾಯಿಸಿದ್ದಾರೆ.