ಬೆಂಗಳೂರು: ಯಲಹಂಕ ತಾಲೂಕು ವ್ಯಾಪ್ತಿಯ ಬೆಳ್ಳಳ್ಳಿ ಸರ್ವೆ ನಂ.55ರ ಸರ್ಕಾರಿ ಗೋಮಾಳದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ದಾಳಿ ನಡೆಸಿರುವ ತಾಲೂಕು ಆಡಳಿತ ಸುಮಾರು 4 ಕೋಟಿ ರೂ. ಮೌಲ್ಯದ ಭೂಮಿಯನ್ನು ವಶಕ್ಕೆ ಪಡೆದಿದೆ.
ಸ್ಥಳೀಯರ ದೂರಿನ ಮೇರೆಗೆ ದಾಳಿ ನಡೆಸಿದ ತಹಶೀಲ್ದಾರ್ ರಘುಮೂರ್ತಿ ಹಾಗೂ ಉಪ ತಹಶೀಲ್ದಾರ್ ಗಂಗಾಧರ್ ಅವರ ತಂಡ ಅಕ್ರಮ ಭೂ ಕಬಳಿಕೆದಾರರಿಗೆ ನಡುಕ ಹುಟ್ಟಿಸಿದ್ದಾರೆ. ಈ ವೇಳೆ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದವರು ಪರಾರಿಯಾಗಿದ್ದು, ಹಿಟಾಚಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸುತ್ತಿದ್ದ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸಿ, ಸರ್ಕಾರಿ ಜಮೀನಿನಲ್ಲಿ ಕಟ್ಟಡ ತ್ಯಾಜ್ಯ ಸುರಿದು ಕಬಳಿಸಲು ಪ್ರಯತ್ನಿಸುತ್ತಿದ್ದ ಕಂಪನಿಯೊಂದರ ಮ್ಯಾನೇಜರ್ ಒಬ್ಬನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ತಹಶೀಲ್ದಾರ್ ರಘುಮೂರ್ತಿ ಮಾತನಾಡಿ, ಕೋಗಿಲು ಗ್ರಾಮಸ್ಥರು ದೂರು ನೀಡಿದ್ದರು. ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿದ್ದೇವೆ. ಬೆಳ್ಳಳ್ಳಿ ಸರ್ವೆ ನಂ.55 ಸರ್ಕಾರಿ ಗೋಮಾಳದಲ್ಲಿ ಅನಧಿಕೃತ ಲೇಔಟ್ ನಿರ್ಮಿಸಲು ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದರು. ಇಲ್ಲಿ ಕೆಲಸ ಮಾಡುತ್ತಿದ್ದವರು ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ಹಿಟಾಚಿಯನ್ನು ವಶಕ್ಕೆ ಪಡೆದಿದ್ದು, ಇದರ ಮಾಲೀಕರ ವಿರುದ್ಧ ದೂರು ದಾಖಲಿಸಲಾಗುವುದು. ಇನ್ನು ಈ ಭಾಗದಲ್ಲಿ ಪರಿಶೀಲನೆ ನಡೆಸಿದಾಗ ಸುಮಾರು 8ರಿಂದ 10 ಅನಧಿಕೃತ ಕಟ್ಟಡ ನಿರ್ಮಾಣ ನಡೆಸುತ್ತಿರುವುದು ಕಂಡು ಬಂದಿದೆ. ಈ ಜಾಗ ಸುಮಾರು 10 ಕೋಟಿ ಮೌಲ್ಯದ್ದಾಗಿದ್ದು, ತಕ್ಷಣ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದರು.
ಸರ್ವೆ ನಂ. 55ರಲ್ಲಿ 1 ಎಕರೆ 20 ಗುಂಟೆ ಜಾಗವನ್ನು ಕ್ರಿಶ್ಚಿಯನ್ ಸ್ಮಶಾನಕ್ಕೆ ಮೀಸಲಿರಿಸಲಾಗಿತ್ತು. ಆ ಜಾಗದಲ್ಲಿ ಮಲ್ಟಿ ನ್ಯಾಷನಲ್ ಕಂಪನಿಯವರು ಕಟ್ಟಡ ನಿರ್ಮಾಣ ತ್ಯಾಜ್ಯ ಸುರಿದು ಬಳಕೆ ಮಾಡಿ, ಈ ಮೂಲಕ ಭೂ ಕಬಳಿಕೆ ಮಾಡಲು ಹುನ್ನಾರ ಮಾಡಿದ್ದರು. ಈ ಸಂಬಂಧ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮ್ಯಾನೇಜರ್ನನ್ನು ಪೊಲೀಸರ ವಶಕ್ಕೆ ನೀಡಿದ್ದೇವೆ. ಈ ಸರ್ವೆ ನಂಬರ್ನಲ್ಲಿ 1 ಗುಂಟೆ ಸರ್ಕಾರಿ ಜಮೀನನ್ನು ಕಬಳಿಸಲು ಬಿಡುವುದಿಲ್ಲ. ಇದರಲ್ಲಿ ಭಾಗಿಯಾದವರ ವಿರುದ್ಧ ದೂರು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬೆಳಗ್ಗೆ ಈ ರಸ್ತೆಯಲ್ಲಿ ಹೋಗುವಾಗ ಸರ್ಕಾರಿ ಜಮೀನಿನಲ್ಲಿ ಕಲ್ಲುಗಣಿಗಾರಿಕೆ ನಡೆಸುತ್ತಿದ್ದರು. ಈ ಸಂಬಂಧ ತಹಶೀಲ್ದಾರ್ ಕಚೇರಿಗೆ ಲಿಖಿತ ದೂರು ನೀಡಿದೆ. ಇದಕ್ಕೆ ತಕ್ಷಣ ಸ್ಪಂದಿಸಿದ ತಹಶೀಲ್ದಾರ್ ಸ್ಥಳಕ್ಕಾಗಮಿಸಿ ಅಕ್ರಮವಾಗಿ ನಡೆಸುತ್ತಿದ್ದ ಕಲ್ಲು ಗಣಿಗಾರಿಕೆ ನಿಲ್ಲಿಸಿ ಭೂಮಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ದೂರುದಾರ ಸುದರ್ಶನ್ ತಿಳಿಸಿದರು.