ಬೆಂಗಳೂರು : ಮೀಸಲಾತಿ ಪರಾಮರ್ಶಿಸುವ ಉನ್ನತ ಮಟ್ಟದ ಸಮಿತಿಯ ಆಹ್ವಾನದ ಹಿನ್ನೆಲೆಯಲ್ಲಿ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಸದಸ್ಯರು ಹಾಗೂ ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ನೇತೃತ್ವದಲ್ಲಿ ಮಠಾಧೀಶರು, ನಿವೃತ್ತ ನ್ಯಾಯಮೂರ್ತಿ ಸುಭಾಷ್ ಆಡಿ ಅವರನ್ನು ಭೇಟಿ ಮಾಡಿ ಪಂಚಮಸಾಲಿ ಮೀಸಲಾತಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ಸುಭಾಷ್ ಅಡಿ ಅವರ ಕಚೇರಿಗೆ ಆಗಮಿಸಿದ ಹರಿಹರದ ಜಗದ್ಗುರು ಪೀಠದ ವಚನಾನಂದ ಸ್ವಾಮೀಜಿ, ಡಾ.ಮಹಾದೇವ ಶಿವಾಚಾರ್ಯ ಮಹಾಸ್ವಾಮಿ, ಬಬಲೇಶ್ವರ, ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿ, ಹಿರೇಮಠ, ಮನಗೂಳಿ ಹಾಗೂ ಪಂಚಮಸಾಲಿ ಮಠಾಧೀಶರ ಒಕ್ಕೂಟ. ಇನ್ನಿತರ ಮಠಾಧೀಶರುಗಳು ಹಾಗೂ ವಕೀಲ ಬಿ.ಎಸ್ ಪಾಟೀಲ್ ಅವರು ಆಯೋಗಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದರು.
ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹರಿಹರ ಪೀಠದ ವಚನಾನಂದ ಶ್ರೀಗಳು, ರಾಜ್ಯ ಸರ್ಕಾರ ನೇಮಕ ಮಾಡಿರುವ ಉನ್ನತ ಮಟ್ಟದ ಮೀಸಲಾತಿ ಸಮಿತಿಯನ್ನು ಭೇಟಿ ಮಾಡಿ ಮೀಸಲಾತಿಗೆ ಬೇಕಿರುವ ದಾಖಲಾತಿ ಎಲ್ಲವನ್ನೂ ನೀಡಿದ್ದು, ಅವರು ಅದಕ್ಕೆ ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಕಳೆದ ಫೆಬ್ರವರಿಯಿಂದ ಕೇಂದ್ರ ಹಿಂದುಳಿದ ಆಯೋಗಕ್ಕೂ ಹೋಗಿದ್ದೇವೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಲಿಂಗಾಯತ ಒಳ ಪಂಗಡ ಮೀಸಲಾತಿ ಬಗ್ಗೆ ಸ್ಪಷ್ಟಪಡಿಸಿದ್ದೇವೆ. ಆಯೋಗಕ್ಕೆ ಸಂಪರ್ಣ ದಾಖಲಾತಿ ಕೊಟ್ಟಿದ್ದೇವೆ. ಆದಷ್ಟು ಬೇಗ ಎಲ್ಲಾ ಪಂಚಮಸಾಲಿ ಯುವಕರಿಗೆ ಮೀಸಲಾತಿ ಸಿಗಲಿದೆ. ನಮ್ಮ ಪಂಚಮಸಾಲಿಗೆ ಬೇಕಿರುವ ರಾಜ್ಯ ಶಾಶ್ವತ ಆಯೋಗಕ್ಕೂ ಮನವಿ ಮಾಡಿದ್ದೇವೆ ಎಂದರು.
ಜಯಮೃತ್ಯುಂಜಯ ಸ್ವಾಮೀಜಿ ಬಾರದ ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು, ಅಂದು ಶಾಶ್ವತ ಹಿಂದುಳಿದ ಆಯೋಗ ಹೋದಾಗಲೂ ಅವರು ಬರಲಿಲ್ಲ. ದಾಖಲೆ ಜೊತೆ ಅಂದೂ ಹೋಗಿದ್ದೆವು. ಇಂದು ಉತ್ತರ ಕರ್ನಾಟಕದ ಹಲವು ಸ್ವಾಮೀಜಿಗಳು ಬಂದಿದ್ದಾರೆ.
ಅವರು ಬಾರದಿರುವ ವಿಚಾರ ಅವರನ್ನೇ ಕೇಳಿ ಎಂದು ಹೇಳಿದರು. ನಮ್ಮ ಕೆಲಸ ಸಮಾಜಕ್ಕೆ, ನಾವು ಒಗ್ಗಟ್ಟಾಗಿ ಕೆಲಸ ಮಾಡ್ತಿದ್ದೇವೆ. ನಮ್ಮ ರಾಜ್ಯದ ಪಂಚಮಸಾಲಿ ಪೀಠದಿಂದ ಕರೆದಿದ್ದೆವು. ಆದರೆ, ಅವರು ಬಂದಿಲ್ಲ ಎಂದರು.
ವಕೀಲ ಬಿ.ಎಸ್. ಪಾಟೀಲ್ ಮಾತನಾಡಿ, ರಾಜ್ಯದ ಪಂಚಮಸಾಲಿ 2ಎಗೆ ಸೇರಿಸುವ ಬಗ್ಗೆ ಕೇಂದ್ರದ ಪಟ್ಟಿಯಲ್ಲಿ ಸೆನ್ಸಸ್ ರಿಪೋರ್ಟ್ ಕೂಡ ನೀಡಲಾಗಿದೆ. ಪಂಚಮಸಾಲಿ ಸಮುದಾಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ನಿವೃತ್ತ ನ್ಯಾ. ಸುಭಾಷ್ ಆಡಿ ಅವರಿಗೆ ವರದಿ ನೀಡಿದೆ.
ಶೈಕ್ಷಣಿಕ ಹಾಗೂ ಉದ್ಯೋಗ ಮೀಸಲಾತಿ ಅನ್ಯಾಯದ ಬಗ್ಗೆ ಮನವಿ ಮಾಡಿದ್ದೇವೆ. ಮೂಲ ದಾಖಲಾತಿ 1871 ಮಿಲ್ಲರ್ಸ್ ರಿಪೋರ್ಟ್‌ನಿಂದ ಹಿಡಿದು ಇಲ್ಲಿಯವರೆಗೂ ನೀಡಿದ್ದೇವೆ ಎಂದು ಹೇಳಿದರು.
ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಸ್ವಾಮೀಜಿ ನೇತೃತ್ವದಲ್ಲಿ ದಾಖಲೆಗಳನ್ನು ನೀಡಿದ್ದೇವೆ. ನಮಗೆ ಸ್ಪಂದಿಸಿದ್ದು, ಮೀಸಲಾತಿಯಿಂದ ಹೊರಗೆ ಇದ್ದ ಬಗ್ಗೆ ತಿಳಿಸಿದ್ದೇವೆ. ಅದಕ್ಕೆ ಪೂರಕವಾಗಿ ಸ್ಪಂದಿಸಿದ್ದು ಹರ್ಷ ತಂದಿದೆ. ಸುಭಾಷ್ ಆಡಿ ಸಮಿತಿ ಶಿಫಾರಸು ಮಾಡಲಿದೆ ಅನ್ನುವ ನಂಬಿಕೆ ಇದೆ ಎಂದರು.