ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿಯಲ್ಲಿ ವಿಕೇಂದ್ರೀಕೃತ ಪದ್ಧತಿಯನ್ನು ಜಾರಿಗೊಳಿಸಿ ಸ್ಥಳೀಯ ಮಟ್ಟದಲ್ಲಿಯೇ ಕಸವನ್ನು ಸಂಸ್ಕರಣೆ ಮಾಡುವ ಪ್ರಕ್ರಿಯೆ ಜಾರಿಗೊಳಿಸಿದಾಗ ಮಾತ್ರ ಕಸದ ಸಮಸ್ಯೆ ಬಗೆಹರಿಸಬಹುದಾಗಿದೆ. ಅದಕ್ಕೆ ನಾಗರಿಕರೆಲ್ಲರೂ ಸಂಪುರ್ಣ ಸಹಕಾರ ನೀಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಘನತ್ಯಾಜ್ಯ ನಿರ್ವಹಣಾ ಕೋಶದ ವತಿಯಿಂದ ಟೌನ್ಹಾಲ್ನಲ್ಲಿ "ಸ್ವಚ್ಛ ಸರ್ವೇಕ್ಷಣ 2023ರ ಕಾರ್ಯಕ್ರಮ"ದಡಿ ಶ್ರಮಿಸುತ್ತಿರುವವರಿಗೆ ಹಮ್ಮಿಕೊಂಡಿದ್ದ ಉತ್ತೇಜನಾ ಅಭಿನಂದನಾ ಸಮಾರಂಭವನ್ನು ಚಾಲನೆ ನೀಡಿದ ಬಳಿಕ ಮಾತನಾಡಿದ ತುಷಾರ್ ಗಿರಿನಾಥ್, ನಮ್ಮ ಮನೆ ಹಾಗೂ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿದಾಗ ನಗರವನ್ನು ಸ್ವಚ್ಛವಾಗಿಡಲು ಸಾಧ್ಯ. ಆದ್ದರಿಂದ ನಗರದ ನಾಗರಿಕರೆಲ್ಲರೂ ಕಸವನ್ನು ಸರಿಯಾದ ರೀತಿಯಲ್ಲಿ ವಿಂಗಡಿಸಿ ಪಾಲಿಕೆಯ ಕಸದ ವಾಹನಗಳಿಗೆ ನೀಡುವ ಮೂಲಕ ನಗರವನ್ನು ಸ್ವಚ್ಛತೆಯಿಂದಿರುವಂತೆ ಮಾಡಬೇಕು. ಕಸವನ್ನು ರಸ್ತೆ ಅಥವಾ ಬೀದಿ ಬದಿ ಬಿಸಾಡುವುದು, ಸುಡುವುದನ್ನು ಮಾಡದೆ ಪ್ರತಿನಿತ್ಯ ತಪ್ಪದೆ ಪಾಲಿಕೆಯ ವಾಹನಗಳಿಗೆ ನೀಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.
16,000 ಕ್ಕೂ ಹೆಚ್ಚು ಪೌರಕಾರ್ಮಿಕರು ಪ್ರತಿನಿತ್ಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ನಗರವನ್ನು ಸ್ವಚ್ಛ ಮಾಡುತ್ತಾರೆ. ಅದಲ್ಲದೇ, ಯಾಂತ್ರಿಕ ಕಸ ಗುಡಿಸುವ ಯಂತ್ರಗಳ ಮೂಲಕವೂ ಸ್ವಚ್ಚತೆ ಮಾಡಲಾಗುತ್ತದೆ. ಆದರೆ, ಮನೆಮನೆಯಿಂದ ಕಸ ಸಂಗ್ರಹಿಸುವ ಪದ್ಧತಿಯನ್ನು ಸರಿಯಾಗಿ ಪಾಲಿಸದಿರುವ ಕಾರಣ ನಗರದಲ್ಲಿ ಕಸದ ಸಮಸ್ಯೆಯಿದೆ. ಅದೆಲ್ಲವನ್ನು ಮಾರ್ಪಾಡು ಮಾಡಬೇಕಾದರೆ ಎಲ್ಲಾ ನಾಗರಿಕರ ಸಹಕಾರ ಅತ್ಯಗತ್ಯ. ರಾತ್ರಿ ವೇಳೆ ಬೀದಿ ಬದಿ ಕಸ ಬಿಸಾಡುವುದರಿಂದ ನಗರದಲ್ಲಿ ಸಾಕಷ್ಟು ಕಡೆ ಬ್ಲಾಕ್ ಸ್ಪಾಟ್ಗಳು ಉತ್ಪತ್ತಿಯಾಗುತ್ತವೆ. ಅದನ್ನು ಪೌರಕಾರ್ಮಿಕರು ಪ್ರತಿನಿತ್ಯ ಸ್ವಚ್ಚಗೊಳಿಸುತ್ತಾರೆ. ಇನ್ನೂ ಕೆಲವೆಡೆ ಸ್ವಚ್ಛ ಮಾಡಿ ಸೌಂದರ್ಯೀಕರಣ ಮಾಡಲಾಗಿರುತ್ತದೆ. ಅದರೆ, ಮತ್ತದೇ ಸ್ಥಳದಲ್ಲಿ ಕೆಲವೇ ದಿನದಲ್ಲಿ ಮತ್ತೆ ಬ್ಲಾಕ್ಸ್ಪಾಟ್ ಉತ್ಪತ್ತಿಯಾಗುತ್ತದೆ. ಇದೆಲ್ಲವೂ ನಿಯಂತ್ರಣವಾದಾಗ ನಗರ ಸ್ವಚ್ಛನಗರವಾಗಿಸಲು ಸಾಧ್ಯ ಎಂದು ಹೇಳಿದರು.
ಉತ್ತಮ ರೀತಿಯಲ್ಲಿ ಕೆಲಸ ಮಾಡಿದಾಗ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಉತ್ತಮ ರ್ಯಾಂಕ್ಗಳಿಸಲು ಸಾಧ್ಯ: ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಬಿಬಿಎಂಪಿಗೆ ಕಳೆದ ಬಾರಿ ನಿರೀಕ್ಷಿತ ರ‍್ಯಾಂಕ್ ಲಭಿಸಿಲ್ಲ. ಈ ಪೈಕಿ ಪ್ರಸಕ್ತ ಸಾಲಿನಲ್ಲಿ ನಗರದ ಕಸದ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಉತ್ತಮ ರ‍್ಯಾಂಕ್ ಪಡೆಯಬೇಕು. ಪಾಲಿಕೆ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ನಿರ್ವಹಿಸಬೇಕು. ಜೊತೆಗೆ ನಾಗರಿಕರಿಗೆ ಘನತ್ಯಾಜ್ಯ ನಿರ್ವಹಣೆಯ ಬಗ್ಗೆ ಅರಿವು ಮೂಡಿಸಿ ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಉತ್ತಮ ರೀತಿಯಲ್ಲಿ ಕೆಲಸ ಮಾಡಿದಾಗ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಉತ್ತಮ ರ‍್ಯಾಂಕ್ ಗಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ಘನತ್ಯಾಜ್ಯ ನಿರ್ವಹಣಾ ವಿಭಾಗದ ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್, ಜಂಟಿ ಆಯುಕ್ತ ಪರಶುರಾಮ್ ಶಿನ್ನಾಳಕರ್, ವಲಯ ಜಂಟಿ ಆಯುಕ್ತ ಕೃಷ್ಣಮೂರ್ತಿ, ಮುಖ್ಯ ಅಭಿಯಂತರರಾದ ಪರಮೇಶ್ವರಯ್ಯ, ಮುಖ್ಯ ಮಾರ್ಷಲ್ ರಾಜ್ ಭೀರ್ ಸಿಂಗ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
5 ವರ್ಗಗಳಲ್ಲಿ ಪ್ರಶಸ್ತಿ ವಿತರಣೆ:
ವರ್ಗ 1: ಸ್ವಚ್ಛತಾ ಚಾಂಪಿಯನ್ : ಘನತ್ಯಾಜ್ಯ ನಿರ್ವಹಣೆ ಚಟುವಟಿಕೆಗಳಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ 30 ನಾಗರಿಕರಿಕರನ್ನು ಗುರುತಿಸಿ ಸ್ವಚ್ಛತಾ ಚಾಂಪಿಯನ್ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ವರ್ಗ 2: ಅತ್ಯುತ್ತಮ ಕೊಡುಗೆ ನೀಡಿರುವ ಘನತ್ಯಾಜ್ಯ ವಿಭಾಗದ ಅಧಿಕಾರಿ/ಸಿಬ್ಬಂದಿಗಳಿಗೆ ಪ್ರಶಸ್ತಿ ಪತ್ರ ಫಲಕವನ್ನು ನೀಡಲಾಯಿತು.
ಪ್ರತಿ ವಾರ್ಡ್ನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಘನತ್ಯಾಜ್ಯ ವಿಭಾಗದ ಸಿಬ್ಬಂದಿ ತ್ರೈಮಾಸಿಕ ಮನ್ನಣೆಯಾಗಿದ್ದು, ಇದಕ್ಕಾಗಿ ಒಟ್ಟು 23 ಸಹಾಯಕ ಕಾರ್ಯಪಾಲಕ ಅಭಿಯಂತರರು, 24 ಮಾರ್ಷಲ್ ಮೇಲ್ವಿಚಾರಕರು, 26 ಪೌರಕಾರ್ಮಿಕರು ಮತ್ತು ಮೇಲ್ವಿಚಾರಕರು, 26 ಕಿರಿಯ ಆರೋಗ್ಯ ಪರಿ ವೀಕ್ಷಕರು, 9 ಲಿಂಕ್ ವರ್ಕರ್ಸ್, 31 ಮಾರ್ಷಲ್‌ಗಳು ಹಾಗೂ 3 ಪ್ಲಾಂಟ್ ಮ್ಯಾನೇಜರ್‌ಗಳನ್ನು ಆಯ್ಕೆ ಮಾಡಿ ಅಭಿನಂದಿಸಲಾಯಿತು.
ವರ್ಗ 3: ವಾರ್ಡ್ ಶ್ರೇಯಾಂಕ: ಸ್ವಚ್ಛ ವಾರ್ಡ್ - ಎಲ್ಲಾ ಹೋಟೆಲ್‌ಗಳು, ಆಸ್ಪತ್ರೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಮಾರುಕಟ್ಟೆ, ಸರ್ಕಾರಿ ಕಚೇರಿಗಳು ಮತ್ತು ಸಾಮಾನ್ಯ ಶುಚಿತ್ವವನ್ನು ಒಳಗೊಂಡಿರುವ ಸ್ವಚ್ಛ ವಾರ್ಡ್ ಶ್ರೇಯಾಂಕವನ್ನು ಪ್ರತಿ ತಿಂಗಳು ಮಾಡಲಾಗುತ್ತದೆ. ಅದರಂತೆ ಪ್ರತಿ ತಿಂಗಳು ಶ್ರೇಯಾಂಕದ ಮೂಲಕ ಮೊದಲ 2 ವಾರ್ಡ್ ಗಳನ್ನು ಸ್ವಚ್ಛ ವಾರ್ಡ್ಗಳನ್ನಾಗಿ ಗುರುತಿಸಲಾಗುತ್ತಿದೆ.
ವರ್ಗ 4: ಐಇಸಿ(ಮಾಹಿತಿ ಶಿಕ್ಷಣ ಸಂವಹನಗಳು) ಚಟುವಟಿಕೆಗಳು: ನಗರದ ನೈರ್ಮಲ್ಯ ಮಟ್ಟವನ್ನು ಸುಧಾರಿಸಲು ನಾಗರಿಕರಿಂದ ಜಿಂಗಲ್ಸ್, ಚಲನಚಿತ್ರಗಳು, ಪೋಸ್ಟರ್, ಡ್ರಾಯಿಂಗ್, ಭಿತ್ತಿಚಿತ್ರಗಳ ಮೂಲಕ ನೀಡುವ ಕಲ್ಪನೆಗಳನ್ನು ಪಡೆಯುವ ಸ್ಪರ್ಧೆಯನ್ನು ಆಯೋಜಿಸಿ, ನಾಗರಿಕರು ನೀಡುವ ಕಲ್ಪನೆಗಳನ್ನು ಕೂಲಕುಂಶವಾಗಿ ಪರಿಶೀಲಿಸಿದ ನಂತರ ಉತ್ತಮ ಪರಿಕಲ್ಪನೆಗಳನ್ನು ನೀಡಿರುವ ಮೊದಲ ಮೂರು ಸ್ಥಾನಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಅಭಿನಂಧಿಸಲಾಯಿತು.
ವರ್ಗ 5: ಸ್ವಚ್ಛ ತಂತ್ರಜ್ಞಾನ, ನಾವೀನ್ಯತೆಗಳು ಮತ್ತು ಉತ್ತಮ ಅಭ್ಯಾಸ- ಸ್ವಚ್ಛ್ ಟೆಕ್ನಾಲಜಿ ಚಾಲೆಂಜ್, ಆವಿಷ್ಕಾರಗಳು ಮತ್ತು ಅತ್ಯುತ್ತಮ ಅಭ್ಯಾಸದ ಅಡಿಯಲ್ಲಿ ಘನತ್ಯಾಜ್ಯ ನಿರ್ವಹಣಾ ವಿಭಾಗದಲ್ಲಿನ ಅತ್ಯುತ್ತಮ ಅಭ್ಯಾಸಗಳಿಗಾಗಿ ಮೊದಲ 4 ಸ್ಥಾನಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು.