ಬೆಂಗಳೂರು: ದೇಶದ ಚೌಕಿದಾರ್ ಎಂದು ಹೇಳಿಕೊಳ್ಳುವ ಪ್ರಧಾನಿ ಮೋದಿ ಅವರು ಇಂದು ರಾಜ್ಯಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ ನಾನು ಅವರಿಗೆ ಕೆಲವು ಪ್ರಶ್ನೆ ಕೇಳಲು ಬಯಸುತ್ತೇನೆ. ನೀವು ನಿಜಕ್ಕೂ ಈ ದೇಶದ ರಕ್ಷಕರೇ? ಕಾವಲುದಾರರೇ? ನಾ ಖಾವೂಂಗಾ ನಾ ಖಾನೇದೂಂಗಾ ಎಂದು ಹೇಳುವುದು ನಿಜಕ್ಕೂ ಸತ್ಯವೇ ಅಥವಾ ಚುನಾವಣಾ ಘೋಷವಾಕ್ಯವೇ? ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವಿ.ವೈ ಘೋರ್ಪಡೆ ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿ.ಎಸ್. ಉಗ್ರಪ್ಪ ಅವರು, ಬಳ್ಳಾರಿ ರಿಪಬ್ಲಿಕ್ ಎರಡು ಜಿಲ್ಲೆ ಆಗಿ ಛಿದ್ರವಾದ ನಂತರ ವಿಜಯನಗರದಲ್ಲಿ ಮತ್ತೊಂದು ರಿಪಬ್ಲಿಕ್ ಆರಂಭವಾಗಿದೆ. ಇಲ್ಲಿ ನಭೂತೋ ನಭವಿಷ್ಯತಿ ಎಂಬ ರೀತಿಯಲ್ಲಿ ರಾಜ್ಯ ಮಂತ್ರಿಗಳಾಗಿರುವ ಆನಂದ್ ಸಿಂಗ್ ಅವರು ಜನರ ಮೇಲೆ ಅಟ್ಟಹಾಸ ತೋರುತ್ತಾ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಪೋಲಪ್ಪ ಎಂಬ ದಲಿತ ವ್ಯಕ್ತಿಗೆ ಧಮಕಿ: ಆ.30ರಂದು ಆನಂದ್ ಸಿಂಗ್ ರವರು 25 ಜನರ ಜತೆ ಪರಿಶಿಷ್ಟ ಜಾತಿ ಮೂಲದ ಪೋಲಪ್ಪ ಎಂಬ ವ್ಯಕ್ತಿ ಮನೆ ಬಳಿ ಹೋಗಿ ಧಮಕಿ ಹಾಕಿದ್ದಾರೆ. ಪರಿಣಾಮ ಅವರ ಕುಟುಂಬದ 6 ಮಂದಿ ರಕ್ಷಣೆ ಸಿಗುತ್ತಿಲ್ಲ ಎಂದು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾರೆ. ಪೊಲೀಸರ ಮಧ್ಯಪ್ರವೇಶದಿಂದ ಇದನ್ನು ತಡೆಯಲಾಗಿದೆ. ಮಂತ್ರಿಗಳು ಅವರು ಧಮಕಿ ಹಾಕಿರುವುದು ವಿಡಿಯೋ ರೆಕಾರ್ಡ್ ಆಗಿದೆ. ಇದರಲ್ಲಿ ನೀನು ನನ್ನ ವಿಚಾರಕ್ಕೆ ಬಂದರೆ ನಿಮ್ಮನ್ನು ಪೆಟ್ರೋಲ್ ಹಾಕಿ ಸುಡುತ್ತೇನೆ ಎಂದು ಧಮಕಿ ಹಾಕಿದ್ದಾರೆ.
ಈ ವ್ಯಕ್ತಿ ನೀಡಿರುವ ದೂರಿನಲ್ಲಿ, ನಾವು ಆರು ತಿಂಗಳ ಹಿಂದೆ ಆನಂದ್ ಸಿಂಗ್ ಅವರ ಹೊಸ ಬಂಗಲೆ ಕಾಲುವೆ ಜಾಗ ಒತ್ತುವರಿ ಆಗಿದೆ ಎಂದು ದಾಖಲೆಗಳನ್ನು ಪತ್ರಿಕಾಗೋಷ್ಠಿ ಮೂಲಕ ಬಿಡುಗಡೆ ಮಾಡಿ ಸಂಬಂಧಪಟ್ಟ ಕಚೇರಿಗಳಿಗೂ ದಾಖಲೆ ನೀಡಿ ದೂರು ನೀಡಿರುತ್ತೇವೆ.
ದೂರು ನೀಡಿದ ನಂತರ ಆನಂದ್ ಸಿಂಗ್ ಹಾಗೂ ಎಂ.ಕೆ ಹನುಮಂತಪ್ಪನವರು ನಮ್ಮ ಮನೆಗೆ ಬಂದು ಬೆದರಿಕೆ ಹಾಕಿ ನಾವು ಮಾಡಿದ ಆರೋಪ ಸುಳ್ಳು ಎಂದು ಹೇಳುವಂತೆ ಹಾಗೂ ಇನ್ನು ಮುಂದೆ ಅವರ ವಿಚಾರಕ್ಕೆ ಹೋಗದಂತೆ ಬೆದರಿಕೆ ಹಾಕಿರುತ್ತಾರೆ.
30-08-2022ರಂದು ಮಧ್ಯಾಹ್ನ 1.15ಕ್ಕೆ ಆನಂದ್ ಸಿಂಗ್ ಅವರು 25 ಜನರೊಂದಿಗೆ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ನಮ್ಮ ತಂಟೆಗೆ ಬರಬೇಡ ಎಂದು ಎಷ್ಟು ಬಾರಿ ಹೇಳಬೇಕು. ನಿನ್ನನ್ನು ಪೆಟ್ರೋಲ್ ಹಾಕಿ ಸುಟ್ಟು, ಹೆಂಡತಿ ಮಕ್ಕಳನ್ನು ಬೀದಿಗೆ ತರುತ್ತೇನೆ ಎಂದು ಎಳೆದಾಡಿದ್ದಾರೆ’ ಎಂದು ತಿಳಿಸಿದ್ದಾರೆ.
ಆದರೆ, ಪೊಲೀಸರು ದಾಖಲಿಸಿರುವ ಎಫ್ಐಆರ್ ನಲ್ಲಿ ಈ ದೂರಿನ ಅನೇಕ ವಿಚಾರಗಳನ್ನು ಸೇರಿಸಿಲ್ಲ. ಈ ದೂರಿನ ಪ್ರಕಾರ ಸೆಕ್ಷನ್ 306 ಆತ್ಮಹತ್ಯೆಗೆ ಪ್ರಚೋದನೆ, ಸೆಕ್ಷನ್ 307 ಕೊಲೆ ಯತ್ನ ಅಡಿಯಲ್ಲಿ ಪ್ರಕರಣ ದಾಖಲಾಗಬೇಕಿತ್ತು. ಆದರೆ ಪೊಲೀಸರು ಈ ಎರಡೂ ಸೆಕ್ಷನ್ ಕೈಬಿಟ್ಟಿದ್ದಾರೆ. ಕೇವೆಲ ಸೆಕ್ಷನ್ 504, 506ರ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಹನಿ ನೀರಾವರಿ ಯೋಜನೆ ವೀಕ್ಷಣೆಗೆ ಬಂದಿದ್ದ ವಿಧಾನಸಭೆ ಸದನ ಸಮಿತಿ-ರೈತರ ನಡುವೆ ವಾಗ್ವಾದ