ಬೆಂಗಳೂರು : ಜಾತ್ಯಾತೀತತೆ ನಿಲುವಿನ ಆಧಾರದಲ್ಲಿ ಜೆಡಿಎಸ್ ಬಿಜೆಪಿಯನ್ನು ಸ್ಪಷ್ಟವಾಗಿ ವಿರೋಧಿಸುತ್ತಿಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಜೆಡಿಎಸ್ ಮುಖಂಡ ವೈಎಸ್‌ವಿ ದತ್ತಾ ತಮ್ಮ ಅಸಮಾಧಾನ ಹೊರ ಹಾಕಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಜಾತ್ಯಾತೀತ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಯಾವುದೇ ಅನುಮಾನ ಇಲ್ಲ. ಅವರು ಪಕ್ಕಾ ಜಾತ್ಯಾತೀತವಾಗಿ, ಬಹಿರಂಗವಾಗಿ ತೀರ್ಮಾನ ಕೈಗೊಂಡಿದ್ದಾರೆ. ನಮಗೆ ಈಗಲೂ ದೇವೇಗೌಡರ ಬಗ್ಗೆ ಆಶಾಭಾವನೆ ಇದೆ ಎಂದರು.
ಪಕ್ಷದ ಒಳಗಡೆ ಸ್ಪಷ್ಟವಾದ ಸೈದ್ದಾಂತಿಕ ನಿಲುವು ಬೇಕು. ಅದು ಕಾಲ ಕಾಲಕ್ಕೆ ಬದಲಾಗಬಾರದು. ಇದನ್ನು ಪಕ್ಷದ ಒಳಗೂ ಹೊರಗೂ ಹೇಳಿದ್ದೇನೆ. ನಿರಂತರತೆ, ಸ್ಪಷ್ಟವಾದ ನಿಲುವು ಇರಬೇಕು. ರಾಷ್ಟ್ರೀಯ ಪಕ್ಷಗಳ ನಡುವೆ ಸಮಾನ ಅಂತರ ಕಾಯಬೇಕು. ಜಾತ್ಯಾತೀತ, ಸಾಮಾಜಿಕ ನ್ಯಾಯ ನಿಲುವು ಇರಬೇಕು ಎಂಬ ಕಾರಣಕ್ಕೆ ಪಕ್ಷದಲ್ಲಿ ಇದ್ದೇನೆ.
ಈ ನಿಲುವು ಎಲ್ಲೋ ಒಂದು ಕಡೆ ಶಿಥಿಲವಾಗುತ್ತಿದೆ ಎಂಬ ಗೊಂದಲ ಮತದಾರರನ್ನು ಕಾಡುತ್ತಿದೆ. ಬಿಜೆಪಿಯನ್ನು ಸ್ಪಷ್ಟವಾಗಿ ವಿರೋಧ ಮಾಡುತ್ತಿಲ್ಲ ಎಂಬ ಅಭಿಪ್ರಾಯ ಅಲ್ಪಸಂಖ್ಯಾತ, ಹಿಂದುಳಿದವರಲ್ಲಿದೆ ಎಂದರು. ಕುಮಾರಸ್ವಾಮಿ ಜಾತ್ಯಾತೀತರಲ್ಲವೇ? ಎಂಬ ಪ್ರಶ್ನೆಗೆ, ನಾನು 20 ವರ್ಷದವನಿದ್ದಾಗಲೇ ದೇವೇಗೌಡರ ಜತೆ ಸೇರಿಕೊಂಡವನು.
ನನಗೆ ಈಗ 69 ವರ್ಷ ಆಗಿದೆ. ದೇವೇಗೌಡರ ಜತೆ ಹೆಚ್ಚು ಸಂಪರ್ಕದಲ್ಲಿ ಇದ್ದೇನೆ. ಅವರು ಏನು ಎಂಬುದು ಸ್ಪಷ್ಟವಾಗಿ ಗೊತ್ತಿದೆ. ಆದರೆ, ಕುಮಾರಸ್ವಾಮಿ ಬಗ್ಗೆ ಕೇಳಬೇಡಿ ಎಂದರು.
ಇದನ್ನೂ ಓದಿ: ಕೊರೊನಾ ದೇಶಾದ್ಯಂತ ಹರಡಲು ವಿಪಕ್ಷಗಳೇ ಕಾರಣ: ಲೋಕಸಭೆಯಲ್ಲಿ 'ಕೈ' ವಿರುದ್ಧ ನಮೋ ವಾಗ್ಬಾಣ
ರಾಗಿ ಖರೀದಿ ಪ್ರಮಾಣ ಹೆಚ್ಚಿಸಲು ಆಗ್ರಹ : ರಾಗಿ ಬೆಳೆ ಖರೀದಿ ಕಡಿತಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕರ್ನಾಟಕ ರಾಜ್ಯದ ಬಯಲು ಸೀಮೆಯ ರಾಗಿ ಬೆಳೆಗಾರರ ಸಮಸ್ಯೆ ಘೋರವಾಗಿದೆ. ಸರ್ಕಾರದ ಆದೇಶದಿಂದ ರಾಗಿ ಬೆಳೆಯುವ ರೈತರು ಕಷ್ಟದಲ್ಲಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ಪ್ರತಿಭಟನೆ ಮಾಡಲಾಗಿದೆ. ಡಿಸಿಗಳನ್ನು ಪ್ರಶ್ನಿಸಿದರೆ, ಸರ್ಕಾರದ ಆದೇಶ ಎಂದು ಹೇಳುತ್ತಾರೆ.
ವಿಧಾನಸೌಧಕ್ಕೆ ಬಂದರೂ ಸಮಸ್ಯೆ ಬಗೆಹರಿದಿಲ್ಲ. ಅಧಿವೇಶನದಲ್ಲಿ ಈ ವಿಚಾರ ಚರ್ಚೆ ಆಗಬೇಕು ಎಂಬುದು ರೈತರ ಬೇಡಿಕೆಯಾಗಿದೆ. ಕೇಂದ್ರ ಸರ್ಕಾರ ರಾಗಿ ಖರೀದಿಗೆ ಬೆಂಬಲ ಬೆಲೆ ಘೋಷಣೆ ಮಾಡಿದೆ. ಈ ಹಿಂದೆ ರೈತ ಬೆಳೆದಷ್ಟು ರಾಗಿ ಮಾರಾಟಕ್ಕೆ ಅವಕಾಶ ಇತ್ತು. ಆದರೆ, 2021ರಲ್ಲಿ ಖರೀದಿಸಲ್ಪಟ್ಟ ರಾಗಿ 52 ಲಕ್ಷ ಕ್ವಿಂಟಾಲ್.
ಈ ಪೈಕಿ 4 ಲಕ್ಷ ಕ್ವಿಂಟಾಲ್‌ನಷ್ಟು ಕಡೂರಿನಿಂದ ಖರೀದಿಯಾಗಿದೆ. ಆದರೆ, ಈ ಬಾರಿ 20 ಲಕ್ಷ ಕ್ವಿಂಟಾಲ್ ಮಾತ್ರ ಖರೀದಿ ಮಾಡಲಾಗಿದೆ. 1,90,000 ಕ್ವಿಂಟಾಲ್ ಕಡೂರಿನಿಂದ ಖರೀದಿ ಮಾಡಿದೆ. ಈಗ ರಾಗಿ ಖರೀದಿ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಸಣ್ಣ ರೈತರಿಂದ 20 ಕ್ವಿಂಟಾಲ್ ಮಾತ್ರ ಖರೀದಿ ಮಾಡುತ್ತೇವೆ ಎಂದು ಸರ್ಕಾರ ಆದೇಶ ಮಾಡಿದೆ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾದರೆ, ರೈತರು ಬೆಳೆದು ಉಳಿದ ರಾಗಿಯನ್ನು ಏನು ಮಾಡಬೇಕು? ಎಂದು ಪ್ರಶ್ನಿಸಿದರು.
ಸರ್ಕಾರದ ಆದೇಶವನ್ನು ಹಿಂಪಡೆಯಬೇಕು. ಆದೇಶದಲ್ಲಿ ಇರುವ ಸಣ್ಣ, ಅತಿ ಸಣ್ಣ ರೈತರೆಂಬ ಉಲ್ಲೇಖ ತೆಗೆದು ಹಾಕಬೇಕು. ಕಡೂರು ತಾಲೂಕಿನ ರಾಗಿ ಬೆಳೆಗಾರರಿಂದ ಕಳೆದ ಬಾರಿಯಂತೆ ಗರಿಷ್ಠ 50 ಕ್ವಿಂಟಾಲ್ ಖರೀದಿ ಮಾಡಬೇಕು. 50 ರಿಂದ 20ಕ್ಕೆ ಇಳಿಸಿದರೆ ಸಣ್ಣ ರೈತರಿಂದ ಮಾತ್ರವಲ್ಲದೇ ಎಲ್ಲರಿಂದ ಖರೀದಿಸಿ ಎಂದು ಆಗ್ರಹಿಸಿದರು. ಈ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತೇನೆ ಎಂದು ಇದೇ ವೇಳೆ ತಿಳಿಸಿದರು.