ಬೆಂಗಳೂರು: ಪಬ್ಗೆ ಹೋಗಿದ್ದ ಯುವತಿಯೊಬ್ಬಳು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಶಂಕೆಯಿದೆ. ತನಿಖೆ ನಡೆಸಿ ಎಂದು ಪೊಲೀಸ್ ಠಾಣಾ ಮೆಟ್ಟಿಲೇರಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಖಾಸಗಿ ಕಂಪನಿಯ ಉದ್ಯೋಗಿಯೊಬ್ಬಳು 'ತನಗೇನಾಗಿದೆ ಎಂದು ತನಿಖೆ ನಡೆಸಿ, ನನ್ನ ಮೇಲೆ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ನಡೆದಿರುವ ಶಂಕೆ ಇದೆ' ಎಂದು ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಡಿಸೆಂಬರ್ 12ರಂದು ರಾತ್ರಿ ಕೋರಮಂಗಲದ ಪಬ್ಗೆ ತೆರಳಿದ್ದ ದೂರುದಾರ ಯುವತಿ, ಮನೆಗೆ ಮರಳಿರಲಿಲ್ಲ. ಬಹುಶಃ ಪಬ್ನಲ್ಲಿ ಆಕೆಗೆ ಪ್ರಜ್ಞೆ ತಪ್ಪಿದೆ. ಆಡುಗೋಡಿಯ ದೇವೇಗೌಡ ಲೇಔಟ್ ಬಳಿ ಯುವತಿಗೆ ಪ್ರಜ್ಞೆ ಬಂದಿದ್ದು, ಅಲ್ಲಿಯೇ ಇದ್ದ ಮನೆಯೊಂದರ ಬಾಗಿಲು ಬಡಿದಿದ್ದಾರೆ. ಬಳಿಕ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ತೆರಳಿದ್ದ ಪೊಲೀಸರು ಯುವತಿಯನ್ನು ರಕ್ಷಿಸಿದ್ದರು. ಪ್ರಜ್ಞಾಹೀನಳಾಗಿದ್ದ ಸಂದರ್ಭದಲ್ಲಿ ತನ್ನ ಮೇಲೆ ಅತ್ಯಾಚಾರ ನಡೆದಿರುವ ಶಂಕೆಯಿದೆ. ನಾನೆಲ್ಲಿದ್ದೆ, ಯಾಕಿದ್ದೆ ಎಂಬುದರ ಕುರಿತು ತನಿಖೆ ಮಾಡಿ ಎಂದು ಪೊಲೀಸರಿಗೆ ಯುವತಿ ದೂರು ನೀಡಿದ್ದಾರೆ. ಆಕೆಯ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ: ಅತ್ಯಾಚಾರ ಸಂತ್ರಸ್ತೆಯರ ಗರ್ಭಪಾತ ವಿಚಾರ: ತಜ್ಞರ ಸಮಿತಿ ರಚಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
25 ವರ್ಷ ಶಿಕ್ಷೆ: ಅಪ್ರಾಪ್ತ ವಯಸ್ಸಿನ ನಾದಿನಿಯ ಮೇಲೆ ಅತ್ಯಾಚಾರ ಎಸಗಿ ಆಕೆ ಗರ್ಭಿಣಿಯಾಗಲು ಕಾರಣನಾದ ವ್ಯಕ್ತಿಯೊಬ್ಬನಿಗೆ ಮೈಸೂರು ನಗರದ ಪೋಕ್ಸೋ ವಿಶೇಷ ನ್ಯಾಯಾಲಯ 25 ವರ್ಷಗಳ ಕಠಿಣ ಸಜೆ ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಮೈಸೂರು ತಾಲೂಕಿನ ನಿವಾಸಿಯೊಬ್ಬ ಶಿಕ್ಷೆಗೊಳಗಾದ ತಪ್ಪಿತಸ್ಥನಾಗಿದ್ದು, ಈತನಿಗೆ ವಿವಾಹವಾಗಿತ್ತು. ಅಡುಗೆ ಕೆಲಸ ಮಾಡುತ್ತಿದ್ದ ಈತ ಹೆಚ್ಚಾಗಿ ತನ್ನ ಮಾವನ ಮನೆಯಲ್ಲಿಯೇ ಇರುತ್ತಿದ್ದನು. ಹೀಗೇ ಮನೆಯಲ್ಲಿ ಅಪ್ರಾಪ್ತ ವಯಸ್ಸಿನ ನಾದಿನಿಯ ಜೊತೆ ಸಲುಗೆಯಿಂದ ಇರುತ್ತಿದ್ದ.
2022ರ ಮಾರ್ಚ್‌ನಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನಾದಿನಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ. ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದಾದ ನಂತರವೂ ಹಲವಾರು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದರಿಂದ ಬಾಲಕಿ ಗರ್ಭಿಣಿಯಾಗಿದ್ದಳು. ಈ ಘಟನೆಯಿಂದ ಅಪ್ರಾಪ್ತೆಯ ತಾಯಿ ವರುಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಇನ್ಸ್ಪೆಕ್ಟರ್ ಸ್ವರ್ಣ ಅವರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.