ಬೆಂಗಳೂರು: ಕನ್ನಡದ ಖ್ಯಾತ ಸಾಹಿತಿ ಯು.ಆರ್.ಅನಂತಮೂರ್ತಿ ಅವರ ಕೃತಿಗಳನ್ನು ತಮಿಳಿಗೆ ಭಾಷಾಂತರಿಸುತ್ತಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಜಿ.ನಂಜುಂಡನ್ ಅವರು ತಮ್ಮ ನಿವಾಸದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ಕೆಂಗೇರಿ ಬಳಿಯ ನಾಗದೇವನಹಳ್ಳಿಯಲ್ಲಿರುವ ನಿವಾಸದಲ್ಲಿ ಕೊಳೆತ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಕಳೆದ 4 ದಿನಗಳಿಂದ ವಿವಿಗೆ ಬಾರದ ಕಾರಣ ವಿಭಾಗದ ಸಹಾಯಕರೊಬ್ಬರು ನಂಜುಂಡನ್ ಮನೆಗೆ ತೆರಳಿದ್ದಾರೆ. ಈ ವೇಳೆಯೂ ಮನೆ ಬಾಗಿಲು ತೆಗೆದಿರಲಿಲ್ಲ. ನಂತರ ತಮಿಳುನಾಡಿನ ಅವರ ಪತ್ನಿಗೆ ಮಾಹಿತಿ ರವಾನಿಸಿದ್ದು ಆಕೆ ನಿವಾಸಕ್ಕೆ ಬಂದು ಕರೆದಾಗಲೂ ಬಾಗಿಲು ತೆರೆಯದಿದ್ದಾಗ ಆತಂಕಗೊಂಡು ಕೆಂಗೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೆ ಬಾಗಿಲು ತೆಗಿಸಿದಾಗ ಕೊಳೆತ ಸ್ಥಿತಿಯಲ್ಲಿ ನಂಜುಂಡನ್ ಶವ ಪತ್ತೆಯಾಗಿದೆ.
ನಂಜುಂಡನ್ ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.