ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕುಮಾರ ಕೃಪ ಅತಿಥಿಗೃಹಕ್ಕೆ ಆಗಮಿಸಿದ್ದು, ಬೆಂಗಳೂರು ನಾಯಕರ ಜೊತೆ ಸಭೆ ನಡೆಸುತ್ತಿದ್ದಾರೆ.
ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸೇರಿದಂತೆ ಹಲವು ವಿಚಾರಗಳ ಕುರಿತು ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಎರಡು ದಿನ ಸರಣಿ ಸಭೆ ನಡೆಸಲಿದ್ದಾರೆ. ಮಾಜಿ ಸಚಿವರಾದ ರಾಮಲಿಂಗಾ ರೆಡ್ಡಿ, ಕೆಜೆ ಜಾರ್ಜ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದು, ಬರಮಾಡಿಕೊಂಡರು. ಶಾಸಕರಾದ ಎಂ ಕೃಷ್ಣಪ್ಪ, ಎನ್.ಎ ಹ್ಯಾರಿಸ್, ಅಖಂಡ ಶ್ರೀನಿವಾಸಮೂರ್ತಿ ಸೇರಿದಂತೆ ಬೆಂಗಳೂರು ನಗರ ವ್ಯಾಪ್ತಿಯ ಹಲವು ಶಾಸಕರು ಸಹ ಇದೇ ಸಂದರ್ಭ ಆಗಮಿಸಿದ್ದು, ಬಿಬಿಎಂಪಿ ಚುನಾವಣೆ ಸಂಬಂಧ ರಣದೀಪ್ ಸುರ್ಜೇವಾಲಾ ಸಭೆ ನಡೆಸುತ್ತಿದ್ದಾರೆ.
ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಮೇಲಿಂದ ಮೇಲೆ ಒತ್ತಾಯ ಮಾಡುತ್ತಲೇ ಬಂದಿರುವ ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮತ್ತೊಮ್ಮೆ ಮನವಿ ಸಲ್ಲಿಸಲಿದ್ದಾರೆ. ಸುರ್ಜೇವಾಲಾ ಸಹ ಪಕ್ಷದ ಯಾವುದೇ ರೀತಿಯ ಆಂತರಿಕ ಗೊಂದಲಗಳನ್ನು ಸಭೆ ನಡೆಸಿ ಪರಸ್ಪರ ನಮ್ಮಲ್ಲಿಯೇ ಬಗೆಹರಿಸಿಕೊಳ್ಳುತ್ತೇವೆ. ಈ ವಿಚಾರವನ್ನು ಆಚೆ ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ.