ರಾಷ್ಟ್ರ ಪ್ರಶಸ್ತಿ ವಿಜೇತ ಸಂಕಲನಕಾರ ಪ್ರಸ್ತುತ ಚೆನ್ನೈ ನಲ್ಲಿ ನೆಲಸಿರುವ ಕನ್ನಡಿಗ ಸುರೇಶ್ ಅರಸ್ ನಿನ್ನೆ ಈಟಿವಿ ಭಾರತ್ ನಲ್ಲಿ ಹಿರಿಯ ನಟ ಕೆ. ಎಸ್. ಶ್ರೀಧರ್ ಅಲಿಯಾಸ್ ಸಿದ್ಲಿಂಗು ಶ್ರೀಧರ್ ಹೇಳಿಕೊಂಡ ಅಭಿಪ್ರಾಯಕ್ಕೆ ಸ್ಪಂದಿಸಿದ್ದಾರೆ.
‘ಲಾಕ್ ಡೌನ್’ ಸಂದರ್ಭವನ್ನು ಸಿನಿಮಾ ಉದ್ಯಮ ಗಂಭೀರವಾಗಿ ಗಮನಿಸುತ್ತಿಲ್ಲ. ಈ ಬಗ್ಗೆ ಒಳ್ಳೆಯ ಚರ್ಚೆ ಆಗಬೇಕು ಎಂಬ ವಿಚಾರದ ಬಗ್ಗೆ ಹಿರಿಯ ನಟ ಶ್ರೀಧರ್ ಮಾತನಾಡಿದ್ದರು.
ಈಟಿವಿ ಭಾರತ್ ಕನ್ನಡ ವಿಭಾಗದ ‘ಸಿತಾರಾ’ ದಲ್ಲಿ ಪ್ರಕಟವಾದ ಸುದ್ದಿಯನ್ನು 600 ಬಹು ಭಾಷಾ ಸಿನಿಮಾಗಳಿಗೆ ಸಂಕಲನ ಮಾಡಿರುವ, ಈ ಕ್ಷೇತ್ರದಲ್ಲಿ ನಾಲ್ಕು ದಶಕಗಳ ಅನುಭವ ಇರುವ ವ್ಯಕ್ತಿ ಸುರೇಶ್ ಅರಸ್ ಒಪ್ಪುತ್ತಾರೆ. ಇಂತಹ ವಿಚಾರವನ್ನು ಯಾರಾದರೂ ವಿಮರ್ಶೆ ಮಾಡಿ ಸಿನಿಮಾ ಉದ್ಯಮದ ಮುಂದೆ ಇಡಬೇಕಾಗಿತ್ತು. ಅದನ್ನು ನನ್ನ ಗೆಳೆಯ ಶ್ರೀಧರ್ ಅವರು ಮಾಡಿದ್ದಾರೆ. ಅದು ವಾಸ್ತವಕ್ಕೆ ಹತ್ತಿರವಾಗಿದೆ. ಅದು ಸತ್ಯ ಸಹ ಎಂದು ಸ್ಪಂದಿಸಿದ್ದಾರೆ.
ಹೌದು. ಭಾರತೀಯ ಚಿತ್ರ ರಂಗ ಈ ಸಂದರ್ಭವನ್ನು ಸರಿಯಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಲಾಕ್ ಡೌನ್ ಮುಗಿದ ನಂತರ ಪ್ರೇಕ್ಷಕ ಸಿನಿಮಾ ನೋಡುವುದಕ್ಕೆ ಬರುತ್ತಾನಾ? ಅಥವಾ ಆಧುನಿಕ ತಂತ್ರಜ್ಞಾನ ನೀಡುತ್ತಿರುವ ಸೌಲಭ್ಯಕ್ಕೆ ಪ್ರೇಕ್ಷಕ ಹೊಂದಿಕೊಂಡು ಸಿನಿಮಾ ಮಂದಿರಗಳತ್ತ ಸುಳಿಯದೇ ಉಳಿಯುತ್ತಾನಾ ಎನ್ನುವ ಯೋಚನೆ ಸಿನಿಮಾ ಉಧ್ಯಮಕ್ಕೆ ಬರಬೇಕು. ಅದಕ್ಕೆ ನುರಿತ ವ್ಯಕ್ತಿಗಳಿಂದ ಪರಿಹಾರ ಸಾಧ್ಯವಾ ಎಂದು ಸಹ ಈ ಸಂದರ್ಭದಲ್ಲೇ ಕಂಡು ಹಿಡಿದುಕೊಳ್ಳಬೇಕು ಎನ್ನುತ್ತಾರೆ ಸುರೇಶ್ ಅರಸ್.
ಸುರೇಶ್ ಅರಸ್ ಪ್ರಕಾರ ಇಂದು ಹೆಚ್ಚು ಚಿತ್ರಮಂದಿರಕ್ಕೆ ಬರುತ್ತಾ ಇರುವವರು ಐಟಿ-ಬಿಟಿ ಯಲ್ಲಿ ಕೆಲಸ ಮಾಡುವವರು. ಅವರುಗಳು 100-200 ಟಿಕೆಟ್ ಬುಕ್ ಮಾಡಿಕೊಂಡು ಸಿನಿಮಾ ವೀಕ್ಷಣೆ ಮಾಡುತ್ತಾರೆ. ಆದರೆ, ಈಗ ಅವರ ಆಲೋಚನೆ ಬದಲಾಗುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಕೊರೊನಾ.
ಇನ್ನು ಕಾರ್ಮಿಕರು, ಹೊಟೇಲ್ ಕೆಲಸ ಮಾಡುವವರು, ವಾಹನ ಚಾಲಕರು, ದಿನಗೂಲಿ ನೌಕರರು ತಾವು ಕೂಡಿಟ್ಟ ಹಣದಲ್ಲಿ ವಾರಕ್ಕೆ ಎರಡು ಸಿನಿಮಾ ನೋಡುತ್ತಾ ಬಂದವರು. ಮೂರನೇ ಸ್ಥಾನದಲ್ಲಿ ಮಧ್ಯಮ ವರ್ಗದ ಜನ ಸಿನಿಮಾಕ್ಕೆ ಬರುವವರು. ಇವರಲ್ಲೂ ಈಗ ಅನೇಕ ಬದಲಾವಾಣೆ ಬರುವುದು ಸಹಜ.
ಹೆಚ್ಚು ಆರ್ಥಿಕ ಸಂಕಷ್ಟ ಅನುಭವಿಸುವವರು ಕಾರ್ಮಿಕ, ಶ್ರಮಿಕ ವರ್ಗ ಹಾಗೂ ಮಧ್ಯಮ ವರ್ಗದ ಸಿನಿಮಾ ಆಸಕ್ತರು. ಅವರ ಆದ್ಯತೆ ಈಗ ಬದಲಾಗುತ್ತದೆ. ಇದರ ಜೊತೆಗೆ ಲಾಕ್ ಡೌನ್ ಸಂದರ್ಭದಲ್ಲಿ ಮೊಬೈಲ್ ನಲ್ಲೇ ಬಹಳ ಕಡಿಮೆ ಬೆಲೆಯಲ್ಲಿ ಸಿನಿಮಾ ವೀಕ್ಷಣೆ ಸಾಧ್ಯ ಮಾಡಿಕೊಟ್ಟಿದ್ದಾರೆ. ಇನ್ನೂ ಆರು ತಿಂಗಳಿಂದ ಒಂದು ವರ್ಷ ಈ ಎರಡು ವರ್ಗದ ಸಿನಿಮಾ ಪ್ರೇಮಿಗಳು ಚಿತ್ರ ಮಂದಿರದ ಕಡೆ ಬರುವುದು ನಿಂತು ಹೋಗಬಹುದು ಎಂಬ ಗಾಬರಿ ಸುರೇಶ್ ಅರಸ್ ಅವರಿಗಿದೆ.
ಇನ್ನೂ ಸೂಪರ್ ಸ್ಟಾರ್ ಸಿನಿಮಾಗಳಿಗೆ ಹಠಕ್ಕೆ ಬಿದ್ದು ಅಭಿಮಾನಿಗಳು ಕೆಲವು ದಿವಸ ಬರಬಹುದು. ಆದರೆ ಮಧ್ಯಮ ಹಾಗೂ ಸಣ್ಣ ಬಜೆಟಿನ ಸಿನಿಮಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವುದು ಅಸಾಧ್ಯ ಆಗುತ್ತದೆ. ಕನ್ನಡ ಸಿನಿಮಾದಲ್ಲಿ 418 ಸಿನಿಮಗಳು ಸೆನ್ಸಾರ್ ಆಗಿ ಬಿಡುಗಡೆಗೆ ಕಾಯುತ್ತಿದೆ. ಅದರಲ್ಲಿ ಬಹುತೇಕ ಸದಾರಣ ಬಜೆಟಿನ ಸಿನಿಮಗಳು. ಅಂತಹ ಸಿನಿಮಾಗಳಿಗೆ ಪ್ರೇಕ್ಷಕ ಮಹಾಪ್ರಭು ಬರುವುದು ಈಗಾಗಲೇ ಕ್ಷೀಣಿಸಿದೆ ಇದು ಇನ್ನೂ ಹೆಚ್ಚುತ್ತದೆ.
ಇಷ್ಟೆಲ್ಲ ಸಂಕಷ್ಟ ನಮ್ಮ ಮುಂದೆ ಇರುವಾಗ ಸುಧೀರ್ಘವಾದ ಆಲೋಚನೆ, ಚರ್ಚೆ, ಪರಿಹಾರ ಕಂಡು ಹಿಡಿದುಕೊಳ್ಳುವುದಕ್ಕೆ ಇದು ಸರಿಯಾದ ಸಮಯ. ಅದನ್ನೇ ನನ್ನ ಸ್ನೇಹಿತರಾದ ಕೆ. ಎಸ್. ಶ್ರೀಧರ್ ಹೇಳಿಕೊಂಡಿರುವುದು ಎನ್ನುತ್ತಾರೆ ಸುರೇಶ್ ಅರಸ್
ಎಲ್ಲವೂ ಸರ್ಕಾರದ ಮಟ್ಟದಲ್ಲಿ ನಿರೀಕ್ಷೆ ಮಾಡುವುದು ತಪ್ಪು. ಸಿನಿಮಾ ಉಧ್ಯಮದಲ್ಲಿ ಸಮಾನ ಮನಸ್ಕರು ಸೇರಿ ಒಂದು ಅವಲೋಕನ ಮಾಡಿಕೊಳ್ಳಬೇಕು. ಇಲ್ಲಾ ಅಂದ್ರೆ ಪ್ರದರ್ಶಕ ವಲಯಕ್ಕೆ ಹೆಚ್ಚು ಹಾನಿ ಆಗುವುದು ಎಂದು ಸುರೇಶ್ ಅರಸ್ ಅಂದಾಜಿಸಿದ್ದಾರೆ.