ಬೆಂಗಳೂರು: ಇಡೀ ದೇಶದಲ್ಲಿಯೇ ಮಾದರಿ ಡಿಜಿಟಲ್ ಗ್ರಂಥಾಲಯ ವ್ಯವಸ್ಥೆಯನ್ನು ಹೊಂದಿದ ಮೊದಲ ರಾಜ್ಯ ಕರ್ನಾಟಕ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ರಾಜ್ಯದಲ್ಲಿನ ಡಿಜಿಟಲ್ ಗ್ರಂಥಾಲಯಗಳ ವಸ್ತುಸ್ಥಿತಿಯನ್ನು ಕೊಂಡಾಡಿದರು.
ನಗರದ ಜಕ್ಕೂರಿನ ಡಾ. ಶಿವರಾಮ ಕಾರಂತ ನಗರದ 2ನೇ ಹಂತದಲ್ಲಿ ಶಾಖಾ ಗ್ರಂಥಾಲಯಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಕಳೆದ ಆರು ತಿಂಗಳ ಅವಧಿಯಲ್ಲಿ ರಾಜ್ಯದೆಲ್ಲೆಡೆ 272 ಡಿಜಿಟಲ್ ಗ್ರಂಥಾಲಯಗಳು ಕಾರ್ಯಾರಂಭ ಮಾಡಿದ್ದು, ಇಡೀ ದೇಶದಲ್ಲಿ ಇದು ಅತ್ಯುತ್ತಮ ಪ್ರಯತ್ನವಾಗಿದೆ. ಕೋವಿಡ್ ಸೃಷ್ಟಿಸಿದ ಸಾಮಾಜಿಕ ಪರಿಸ್ಥಿತಿ ಹಿನ್ನೆಲೆ ರಾಷ್ಟ್ರದಲ್ಲಿಯೇ ಮೊದಲ ಉಪಕ್ರಮವಾಗಿ ಕರ್ನಾಟಕ ರಾಜ್ಯದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಡಿಜಿಟಲ್ ಗ್ರಂಥಾಲಯ ಮೊಬೈಲ್ ಆ್ಯಪ್ಅನ್ನು ಲೋಕಾರ್ಪಣೆಗೊಳಿಸಿದ್ದು, ಇಂದು ನಾಲ್ಕು ಲಕ್ಷಕ್ಕೂ ಹೆಚ್ಚು ಜನ ಈ ಆ್ಯಪ್ ಬಳಸುತ್ತಿದ್ದಾರೆ. ಒಂದು ಲಕ್ಷಕ್ಕೂ ಮೀರಿದ ಪುಸ್ತಕಗಳು ಈ ಆ್ಯಪ್ನಲ್ಲಿ ಲಭ್ಯವಿವೆ. ಈ ತನಕ 15 ಲಕ್ಷ ಜನರು ಇದರ ಉಪಯೋಗ ಪಡೆದಿದ್ದಾರೆ ಎಂದು ಸಚಿವರು ಹೇಳಿದರು.
ಪುಸ್ತಕ ಸಂಸ್ಕೃತಿ ಬೆಳೆಸಬೇಕು:
ಪುಸ್ತಕ ಸಂಸ್ಕೃತಿ ಬೆಳೆಸಲು ರಾಜ್ಯಾದ್ಯಂತ 6,841 ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಇದು ದೇಶದಲ್ಲಿಯೇ ಮಾದರಿ ಗ್ರಂಥಾಲಯ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ವರ್ಗದ ಜನರ ಜ್ಞಾನಾರ್ಜನೆಗೆ ಉಪಯೋಗವಾಗುವಂತೆ ಗ್ರಂಥಾಲಯಗಳನ್ನು ಅವಶ್ಯಕ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.
ಸ್ಥಳೀಯ ಕ್ಷೇಮಾಭಿವೃದ್ಧಿ ಸಂಘದವರು ಉಚಿತವಾಗಿ ನೀಡಿದ ಈ ನಿವೇಶನದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುವುದು. ಈ ಕಟ್ಟಡವು 3 ಅಂತಸ್ತಿನಿಂದ ಕೂಡಿದ್ದು, ಅದರಲ್ಲಿ ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ವಿವಿಧ ವಿಭಾಗಗಳನ್ನು ಸೃಜಿಸಲಾಗುವುದು. ಮಕ್ಕಳಿಗಾಗಿ ಈ ಗ್ರಂಥಾಲಯದಲ್ಲಿ ವಿಶೇಷ ವಿಭಾಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಪ್ರತ್ಯೇಕ ವಿಭಾಗವಿರಲಿದೆ ಎಂದು ಮಾಹಿತಿ ನೀಡಿದರು.
ಈ ಕಟ್ಟಡವನ್ನು ಸಾಧ್ಯವಾದಷ್ಟು ತ್ವರಿತವಾಗಿ ನಿರ್ಮಾಣ ಮಾಡಿ ಸಾರ್ವಜನಿಕ ಉಪಯೋಗಕ್ಕೆ ಅರ್ಪಿಸಲಾಗುವುದು. ಈ ಕುರಿತು ಹೆಚ್ಚಿನ ಗಮನ ಹರಿಸಲು ಇಲಾಖೆಯ ನಿರ್ದೇಶಕರಿಗೆ ಸೂಚಿಸಿದರು. ಇದೇ ವೇಳೆ ಸ್ಥಳೀಯರ ಬೇಡಿಕೆಯಂತೆ ಈ ಗ್ರಂಥಾಲಯದ ಮುಂದೆ ಡಾ. ಶಿವರಾಮ ಕಾರಂತರ ಪ್ರತಿಮೆ ಸ್ಥಾಪನೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.