ಅಥಣಿ(ಬೆಳಗಾವಿ): ಸರ್ಕಾರಿ ಶಾಲೆಯ ಬಾಲಕನೊಬ್ಬ 'ಪಕ್ಕೆಲುಬು' ಎಂಬ ಪದ ಹೇಳಲು ಬಾರದೆ ತೊದಲುವ ವಿಡಿಯೋ ಮಾಡಿದ ಶಿಕ್ಷಕನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.
ಶಾಲೆಯಲ್ಲಿ ಶಿಕ್ಷಕರೊಬ್ಬರು ಮಗುವಿಗೆ ಪಕ್ಕೆಲುಬು ಪದವನ್ನು ಉಚ್ಛಾರ ಮಾಡುವಂತೆ ಹೇಳುತ್ತಾರೆ. ಆದರೆ ಆ ಬಾಲಕ ಎಷ್ಟೇ ಪ್ರಯತ್ನಪಟ್ಟರೂ ಪಕ್ಕೆಲುಬು ಪದವನ್ನು ಉಚ್ಚರಿಸಲು ಸಾಧ್ಯವಾಗುವುದಿಲ್ಲ. ಆದ್ರೆ ಶಿಕ್ಷಕ, ವಿದ್ಯಾರ್ಥಿಯನ್ನು ಬೆದರಿಸಿ ಪಕ್ಕೆಲುಬು ಪದ ಉಚ್ಚಾರಣೆ ಮಾಡುವಂತೆ ಬಲವಂತ ಮಾಡುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಸಚಿವ ಎಸ್. ಸುರೇಶ್ ಕುಮಾರ್ ಸುತ್ತೋಲೆ ಹೊರಡಿಸಲಾಗಿದೆ.
ಈ ವಿಡಿಯೋ ನೋಡಿರುವ ಸಚಿವ ಸುರೇಶ್ ಕುಮಾರ್, ಮಕ್ಕಳು ತಪ್ಪು ಉಚ್ಚಾರ ಮಾಡುವುದು ಸಹಜ. ಮಕ್ಕಳಿಗೆ ಶಿಕ್ಷಕರು ಸರಿಯಾಗಿ ಉಚ್ಛಾರ ಮಾಡುವುದನ್ನು ಕಲಿಸಬೇಕು. ಆದರೆ ಅದನ್ನು ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ಅಪರಾಧ. ತಕ್ಷಣ ಮೇಲ್ಕಂಡ ಕೃತ್ಯ ಯಾವ ಶಾಲೆಯಲ್ಲಿ ನಡೆದಿದೆ ಮತ್ತು ಯಾವ ಶಿಕ್ಷಕರು ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದಾರೆ ಎಂಬುದನ್ನು ಪತ್ತೆ ಮಾಡಿ, ಈ ಬಗ್ಗೆ ಸೈಬರ್ ಕ್ರೈಮ್ ಗೆ ದೂರು ನೀಡಬೇಕು. ಹಾಗೂ ಆ ಶಿಕ್ಷಕರು, ಶಾಲಾ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಎಂದು ಸೂಚನೆ ನೀಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಜೊತೆಗೆ ಮಕ್ಕಳ ಬಗ್ಗೆ ಶಿಕ್ಷಕರು ವ್ಯಂಗ್ಯವಾಗಿ ತೋರಿಸುವುದು ಮತ್ತು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವಂತ ಕೃತ್ಯಕ್ಕೆ ಮುಂದಾದರೆ ಅಂತಹ ಶಿಕ್ಷಕರು, ಶಾಲಾ ಮುಖ್ಯಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆಯನ್ನು ಶಿಕ್ಷಣ ಸಚಿವರು ನೀಡಿದ್ದಾರೆ.