ಬೆಂಗಳೂರು: ಮಾಜಿ ಸಚಿವ ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಿಂಬಾವಳಿ ಪ್ರಮಾಣ ವಚನ ಸ್ವೀಕಾರ ಖಚಿತ ಎಂದು ರಾಜಭವನದ ಎದುರು ಜಮಾವಣೆಗೊಂಡಿದ್ದ ಬೆಂಬಲಿಗರು ಪಟ್ಟಿಯಲ್ಲಿ ಹೆಸರಿಲ್ಲ ಎನ್ನುವುದು ತಿಳಿಯುತ್ತಿದ್ದಂತೆ ತೀವ್ರ ಬೇಸರ ವ್ಯಕ್ತಪಡಿಸಿದರು. ರಾಜಭವನದ ಮುಂಭಾಗದ ಪರದೆಯನ್ನು ನೋಡುತ್ತಾ ಮೌನವಾಗಿ ನಿಂತರು.
ಈ ವೇಳೆ ಈಟಿವಿ ಭಾರತ್ ಜೊತೆ ಮಾತನಾಡಿದ ಲಿಂಬಾವಳಿ ಬೆಂಬಲಿಗ ವೇಣುಗೋಪಾಲ್, ಮಹದೇವಪುರ ಐಟಿ ಬಿಟಿ ಕ್ಷೇತ್ರ, ಸಚಿವ ಸ್ಥಾನ ಕೊಡಬೇಕಿತ್ತು, ನಮಗೆ ಅನ್ಯಾಯವಾಗಿದೆ, ಮುಂದಿನ ದಿನವಾದರೂ ಸಚಿವರನ್ನಾಗಿ ಮಾಡಿ, ಅಭಿವೃದ್ಧಿಗೆ ಸಹಕಾರ ಮಾಡಲು ಅವಕಾಶ ನೀಡಿ ಎಂದು ಒತ್ತಾಯಿಸಿದರು.
ದಾವಣಗೆರೆಯಲ್ಲಿ ಯಾದವ ಮಹಾಸಭಾ ಪ್ರೊಟೆಸ್ಟ್
ಹಾಗೆಯೇ ದಾವಣಗೆರೆಯಲ್ಲೂ ಯಾದವ ಸಮಾಜ ಏಕೈಕ ಶಾಸಕಿ ಪೂರ್ಣಿಮಾ ಶ್ರೀನಿವಾಸ್ಗೆ ಸಚಿವ ಸ್ಥಾನ ನೀಡಿಲ್ಲ ಎಂದು ಯಾದವ ಮಹಾಸಭಾದವರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಯಾದವ ಸಮಾಜಕ್ಕೆ ಸಚಿವ ಸ್ಥಾನ ನೀಡುತ್ತೇವೆ ಎಂದು ಯಡಿಯೂರಪ್ಪ ಮಾತು ಕೊಟ್ಟಿದ್ದರು. ಆದರೆ ಸಮಾಜದ ಏಕೈಕ ಶಾಸಕಿ ಪೂರ್ಣಿಮ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹುಕ್ಕೇರಿಯಲ್ಲಿ ಕತ್ತಿ ಬೆಂಬಲಿಗರ ಪ್ರತಿಭಟನೆ:
ಇನ್ನೊಂದೆಡೆ ಬೆಳಗಾವಿ ಜಿಲ್ಲೆಯಲ್ಲಿ ಕತ್ತಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಹುಕ್ಕೇರಿ ಶಾಸಕ ಉಮೇಶ ಕತ್ತಿ ಯವರಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹುಕ್ಕೇರಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.