ಬೆಂಗಳೂರು: ಕೋವಿಡ್ ನಿರ್ವಹಣೆಗಾಗಿ 900 ಕೋಟಿ ರೂ., ತಿರುಪತಿಯಲ್ಲಿ ರಾಜ್ಯದ ವಸತಿ ಗೃಹ, ಮೂಲ ಸೌಕರ್ಯಕ್ಕಾಗಿ 100 ಕೋಟಿ ರೂ., ಪ್ರವಾಹ ನಿರ್ವಹಣೆಗಾಗಿ 74.19 ಕೋಟಿ ರೂ. ಸೇರಿದಂತೆ ಒಟ್ಟು 3,320.40 ಕೋಟಿ ರೂ. ಮೊತ್ತದ ಪೂರಕ ಅಂದಾಜನ್ನು ಸರ್ಕಾರ ಇಂದು ವಿಧಾನಸಭೆಯಲ್ಲಿ ಮಂಡನೆ ಮಾಡಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರವಾಗಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪೂರಕ ಅಂದಾಜು ಮಂಡಿಸಿದರು. ಒಟ್ಟು 3,320.40 ಕೋಟಿ ರೂ. ಪೈಕಿ 291.57 ಕೋಟಿ ರೂ. ಪ್ರಭೃತ ವೆಚ್ಚ ಮತ್ತು 3,028.83 ಕೋಟಿ ರೂ. ಪುರಸ್ಕೃತ ವೆಚ್ಚ ಸೇರಿದೆ. 346.22 ಕೋಟಿ ರೂ. ಕೇಂದ್ರ ಸಹಾಯಕ್ಕೆ ಸಂಬಂಧಿಸಿದ್ದಾಗಿರುವುದರಿಂದ ಹೊರ ಹೋಗುವ ನಿವ್ವಳ ನಗದು ಮೊತ್ತ 2,838.06 ಕೋಟಿ ರೂ. ಆಗಿದ್ದು, ಕೋವಿಡ್ ನಿಯಂತ್ರಣಕ್ಕಾಗಿ ಆಹಾರ ಇಲಾಖೆಯು 711.62 ಕೋಟಿ ರೂ. ವೆಚ್ಚ ಮಾಡಿದರೆ, ಆರೋಗ್ಯ ಇಲಾಖೆಯು 205.40 ಕೋಟಿ ರೂ. ವೆಚ್ಚ ಮಾಡಿದೆ. ಒಟ್ಟಾರೆ ಕೋವಿಡ್‌ಗಾಗಿ ಸುಮಾರು 900 ಕೋಟಿ ರೂ.ನಷ್ಟು ಖರ್ಚು ಮಾಡಲಾಗಿದೆ.
ಕೇಂದ್ರ ಸರ್ಕಾರ ಘೋಷಿಸಿರುವ ಪಿಎಂಜಿಕೆಎವೈ ಯೋಜನೆಯನ್ನು ಅನುಷ್ಠಾನಗೊಳಿಸಲು 711.62 ಕೋಟಿ ರೂ. ಆಹಾರ ಇಲಾಖೆ ವೆಚ್ಚ ಮಾಡಿದೆ. ಆರೋಗ್ಯ ಇಲಾಖೆಯು ಕೋವಿಡ್ ನಿಯಂತ್ರಣಕ್ಕಾಗಿ ತುರ್ತು ಔಷಧಿ, ಆರ್‌ಟಿಪಿಸಿಆರ್ ಕಿಟ್ಸ್, ಎಕ್ಸ್ಟ್ರಾಕ್ಸನ್ ಕಿಟ್ ಖರೀದಿಗೆ ಸಂಬಂಧಿಸಿದಂತೆ 170.72 ಕೋಟಿ ರೂ. ಮತ್ತು ವೆಂಟಿಲೇಟರ್, ಪಲ್ಸ್ ಆಕ್ಸಿಮೀಟರ್ ಖರೀದಿಗೆ 34.68 ಕೋಟಿ ರೂ. ಖರ್ಚು ಮಾಡಿದೆ.
ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಪ್ರವಾಹದಿಂದ ಹಾನಿಗೀಡಾದ ಮನೆಗಳ ದುರಸ್ತಿ, ಪುನರ್ ನಿರ್ಮಾಣಕ್ಕಾಗಿ ಪರಿಹಾರ ನೀಡಲು ಕಂದಾಯ ಇಲಾಖೆ 74.19 ಕೋಟಿ ರೂ. ಖರ್ಚು ಮಾಡಿದೆ. ಆಂಧ್ರ ಪ್ರದೇಶದ ತಿರುಮಲದಲ್ಲಿನ ರಾಜ್ಯದ ಛತ್ರಕ್ಕೆ ಸೇರಿದ ಜಾಗದಲ್ಲಿ ವಸತಿ ಗೃಹ ಮತ್ತು ಇತರೆ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ತಿರುಮಲ ತಿರುಪತಿ ದೇವಾಲಯ ಪ್ರಾಧಿಕಾರಕ್ಕೆ 100 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ವೆಚ್ಚಕ್ಕಾಗಿ 4 ಕೋಟಿ ರೂ. ಒದಗಿಸಲಾಗಿದೆ. ಅಲ್ಲದೆ 3.05 ಕೋಟಿ ರೂ. ಸಾದಿಲ್ವಾರು ನಿಧಿಯಿಂದ ಬಿಡುಗಡೆ ಮಾಡಲಾಗಿದೆ. ವಿಧಾನ ಪರಿಷತ್ ಚುನಾವಣೆಗಾಗಿ 2.50 ಕೋಟಿ ರೂ. ನೀಡಲಾಗಿದೆ.
ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಮರು ಪಾವತಿಸಬೇಕಾಗಿರುವ ಸಾಲವನ್ನು ಮರು ಪಾವತಿ ಮಾಡಲು ರಾಜ್ಯ ಉಗ್ರಾಣ ನಿಗಮಕ್ಕೆ ಸಾಲವಾಗಿ ಸಾದಿಲ್ವಾರು ನಿಧಿಯಿಂದ 33.06 ಕೋಟಿ ರೂ. ನೀಡಲಾಗಿದೆ. ನಿಗಮ/ಮಂಡಳಿಗಳಿಂದ ನಿಯೋಜನೆ ಮೇಲೆ ವಿಧಾನಸಭೆ/ವಿಧಾನ ಪರಿಷತ್‌ನ ಸದಸ್ಯರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವೇತನ/ಭತ್ಯೆ ಪಾವತಿಗಾಗಿ 64.56 ಲಕ್ಷ ಒದಗಿಸಲಾಗಿದೆ.