ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎನ್ನುವ ಜಿಲ್ಲೆಯ ಬಹುಕಾಲದ ಬೇಡಿಕೆಗೆ ಈ ವರ್ಷದ ಬಜೆಟ್ನಲ್ಲಿ ರಾಜ್ಯ ಸರ್ಕಾರ ಅಸ್ತು ಎಂದಿದ್ದು, ಪ್ರಸಕ್ತ ವರ್ಷ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು ಎಂದು ಚುನಾವಣಾ ವರ್ಷದ ಹೊಸ್ತಿಲಿನ ಬಿಗ್ ಬಜೆಟ್ನಲ್ಲಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಇದರ ಜೊತೆಗೆ ಮೈಸೂರು, ಶಿವಮೊಗ್ಗ ಮತ್ತು ಕಲಬುರಗಿಗಳಲ್ಲಿ ಕಿದ್ವಾಯಿ ಸಂಸ್ಥೆಯಡಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಜತೆಗೆ ಪ್ರಸಕ್ತ ವರ್ಷದಲ್ಲಿ ರಾಯಚೂರಿನಲ್ಲಿ ಏಮ್ಸ್ ಮಾದರಿಯ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುವುದು ಎಂದು ರಾಯಚೂರಿನ ಜನತೆಗೆ ಮಾತ್ರವಲ್ಲದೇ ಪಕ್ಕದ ಜಿಲ್ಲೆಗಳ ಜನರಿಗೂ ಆರೋಗ್ಯ ಭರವಸೆಯನ್ನು ಸಿಎಂ ನೀಡಿದ್ದಾರೆ. ಕ್ಯಾನ್ಸರ್ ಪತ್ತೆಗೆ ಅಗತ್ಯ ಸಾಧನಗಳ ಖರೀದಿಗೆ 12 ಕೋಟಿ ಅನುದಾನ ಮೀಸಲಿಡಲಾಗಿದೆ.
ಇದುವರೆಗೆ ಕಾಗದದಲ್ಲಿ ದಾಖಲಾಗುತ್ತಿದ್ದ ರೋಗಿಗಳ ಆರೋಗ್ಯ ದಾಖಲೆಗಳನ್ನು ಒಂದೆಡೆ ದೀರ್ಘ ಕಾಲದ ವರೆಗೆ ಸುರಕ್ಷಿತವಾಗಿ ಕ್ರೋಡೀಕರಿಸಲು, ರೋಗಿಗಳ ಅನುಮತಿ, ಸಮ್ಮತಿಯೊಂದಿಗೆ ವೈದ್ಯಕೀಯ ದಾಖಲಾತಿಗಳನ್ನು ಡಿಜಿಟಲೀಕರಣ ಮಾಡಲಾಗುವುದು. ಕಾಗದ ರೂಪದಲ್ಲಿದ್ದ ದಾಖಲೆಗಳು ಕಾರಣಾಂತರಗಳಿಂದ ರೋಗಿಗಳಿಂದ ಕೈತಪ್ಪಿ ಹೋಗುವ ಹಾಗೂ ಆಸ್ಪತ್ರೆಗಳನ್ನು ತಪ್ಪಿ ಹೋಗುವ ಸಾಧ್ಯತೆಗಳಿವೆ. ಹಾಗಾಗಿ ಆ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಿದರೆ, ಮತ್ತೊಮ್ಮೆ ಚಿಕಿತ್ಸೆ ಬರುವಾಗ, ರೋಗಿಗಳಿಗೆ ಹಾಗೂ ವೈದ್ಯರಿಗೆ ಇಬ್ಬರಿಗೂ ಸಹಾಯಕವಾಗಲಿದೆ.
ಜನಸಾಮಾನ್ಯರ ಮಾನಸಿಕ ಆರೋಗ್ಯ ಕಾಪಾಡಲು ಮತ್ತು ಅವುಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಿಮ್ಹಾನ್ಸ್ ಸಹಯೋಗದೊಂದಿಗೆ ಕರ್ನಾಟಕ ಮೆದುಳು ಯೋಜನೆಯನ್ನು ಪ್ರಾರಂಭಿಸಿ, ಆ ಯೋಜನೆಗೆ 25 ಕೋಟಿ ರೂ. ವ್ಯಯಿಸಿ ಇಡೀ ರಾಜ್ಯಕ್ಕೆ ವಿಸ್ತರಣೆ ಮಾಡಲಾಗುವುದು. ಎಲ್ಲಾ ಜಿಲ್ಲೆಗಳಲ್ಲಿ ಹ್ಯಾಂಡ್ ಹೋಲ್ಡ್ ಎಕ್ಸ್ ರೇ ಯಂತ್ರಗಳ ಸಹಾಯದಿಂದ ಕ್ಷಯ ರೋಗಿಗಳ ಆರಂಭಿಕ ತಪಾಸಣೆ ಮತ್ತು ಚಿಕಿತ್ಸೆಗಾಗಿ ಸಮುದಾಯ ಆಧಾರಿತ ತಪಾಸಣೆ ಚಟುವಟಿಕೆ ನಡೆಸಲು 12.50 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಜನರ ಆರೋಗ್ಯ ಕಾಪಾಡುವ ಗುರಿ ಹೊಂದಿರುವ ಸರ್ಕಾರ, ಬಜೆಟ್ನಲ್ಲಿ 'ಮನೆ ಮನೆಗೆ ಆರೋಗ್ಯ' ಎನ್ನುವ ಕಾರ್ಯಕ್ರಮ ಘೋಷಣೆ ಮಾಡಿದ್ದು, ಇದರಡಿಯಲ್ಲಿ ರಾಜ್ಯದ ಗ್ರಾಮೀಣ ಜನರಿಗೆ ಈ ಸಾಲಿನಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಹಳ್ಳಿಗಳಲ್ಲಿ ಎರಡು ಬಾರಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುವುದು. ತೀವ್ರವಾದ ಕಾಯಿಲೆಗಳನ್ನು ಪ್ರಾಥಮಿಕ ಹಂತದಲ್ಲೇ ಪತ್ತೆಹಚ್ಚುವ ಕೆಲಸವಾಗಲಿದೆ. ಅದರ ಜೊತೆಗೆ ಈ ಯೋಜನೆಯಡಿಯಲ್ಲೇ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರ ಮನೆ ಬಾಗಿಲಿಗೆ ಔಷಧಗಳನ್ನು ತಲುಪಿಸುವಂತೆ ಕ್ರಮ ವಹಿಸಲಾಗುವುದು ಎಂದು ಬಜೆಟ್ನಲ್ಲಿ ಹೇಳಿದ್ದಾರೆ.
ಪಿಎಂ ಅಭಿಂ(ಎಬಿಎಚ್ಐಎಂ) ಯೋಜನೆಯಡಿ ಅಡಿ ತೃತೀಯ ಹಂತದ ಆರೈಕೆಗಾಗಿ ಕೋಲಾರ, ಬಾಗಲಕೋಟೆ, ಯಾದಗಿರಿ, ಗದಗ, ಚಿಕ್ಕಮಗಳೂರು, ರಾಮನಗರ, ವಿಜಯನಗರ ಮತ್ತು ದೊಡ್ಡ ಬಳ್ಳಾಪುರ ಆಸ್ಪತ್ರೆಗಳಲ್ಲಿ 50 ಹಾಸಿಗೆ ಕ್ರಿಟಿಕಲ್ ಕೇರ್ ಯೋಜನೆ, ತುಮಕೂರು ಮತ್ತು ಬೆಂಗಳೂರಿನಲ್ಲಿ 100 ಹಾಸಿಗೆಯ ಕ್ರಿಟಿಕಲ್ ಕೇರ್ ಸ್ಥಾಪನೆ. ಹಾವೇರಿಯ ಸವಣೂರಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪನೆಗೆ ನಿರ್ಧಾರ.
ಮಹಿಳೆಯರಲ್ಲಿನ ರಕ್ತ ಹೀನತೆ, ಅಪೌಷ್ಟಿಕತೆ ನಿವಾರಣೆಗೆ 100 ಕೋಟಿ ಅನುದಾನ. ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳ ಸಂಖ್ಯೆ ಹೆಚ್ಚಿಸಲು ಕ್ರಮ. ಆರು ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ಮಾಡಲು ವಾತ್ಸಾಲ್ಯ ಯೋಜನೆ ಆರಂಭ. ನಗು-ಮಗು ಯೋಜನೆಗಾಗಿ ಸಾರಿಗೆ ಸೌಲಭ್ಯ ಕಲ್ಪಿಸಲು 12.5 ಕೋಟಿ ಮೀಸಲು. ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಪ್ರಯೋಗಾಲಯ ಹಾಗೂ ಬೆಂಗಳೂರಿನಲ್ಲಿ ರಾಜ್ಯ ರೆಫರಲ್ ಪ್ರಯೋಗಾಲಯ ಸ್ಥಾಪನೆ. 137 ಕೋಟಿ ವೆಚ್ಚದಲ್ಲಿ 65 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ. 150 ಕೋಟಿ ವೆಚ್ಚದಲ್ಲಿ ಆಸ್ಪತ್ರೆ 24/7 ಕಾರ್ಯ ನಿರ್ವಹಿಸಲು ಮೂಲಸೌಲಭ್ಯ ಅಭಿವೃದ್ಧಿ, ಮಾನವ ಸಂಪತ್ತಿಗೆ ಕ್ರಮ. 6 ಕೋಟಿ ವೆಚ್ಚದಲ್ಲಿ ಬೆಂಗಳೂರು ಹುಬ್ಬಳ್ಳಿ, ಕಲಬುರಗಿಯಲ್ಲಿ ನಾಲ್ಕು ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಐವಿಎಫ್ ಕ್ಲಿನಿಕ್ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಬೆಂಗಳೂರು ನಗರದಲ್ಲಿ ಉತ್ತಮ ಆರೋಗ್ಯಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಮಹಾನಗರದ ಆರೋಗ್ಯ ಆಡಳಿತ ವ್ಯವಸ್ಥೆಯನ್ನು ಬೆಂಗಳೂರು ಹೆಲ್ತ್ ಸಿಸ್ಟಮ್ ಎಂದು ಮರು ರಚಿಸಲು ಸರ್ಕಾರ ಉದ್ದೇಶಿಸಿದೆ. ಬೆಂಗಳೂರಿನ 243 ವಾರ್ಡ್ಗಳಲ್ಲಿ ನಮ್ಮ ಕ್ಲಿನಿಕ್ ಹಾಗೂ 27 ಸ್ಮಾರ್ಟ್ ವರ್ಚುವಲ್ ಕ್ಲಿನಿಕ್ ಆರಂಭಿಸಲು ಅನುಮೋದನೆ ನೀಡಲಾಗಿದೆ. ಶೃಂಗೇರಿ, ಯಳದೂರು, ನೆಲಮಂಗಲ, ಹೊಸಕೋಟೆ, ಖಾನಾಪೂರ, ಆನೇಕಲ್, ಶಿರಹಟ್ಟಿಯಲ್ಲಿ 100 ಹಾಸಿಗೆ ಸಾಮರ್ಥ್ಯವುಳ್ಳ ತಾಲೂಕು ಆಸ್ಪತ್ರೆಯಾಗಿ ಹಂತ ಹಂತವಾಗಿ ಮೇಲ್ದರ್ಜೆಗೆ ಏರಿಸಲಾಗುವುದು.
ಸಾರ್ವಜನಿಕರಿಗೆ ದ್ವಿತೀಯ, ತೃತೀಯ ಆರೈಕೆ ಸೇವೆಗಳನ್ನು ನೀಡಲು ಈ ಸಾಲಿನಲ್ಲಿ ಜಯದೇವ ಸಂಸ್ಥೆಯ ಅಡಿಯಲ್ಲಿ 263 ಕೋಟಿ ರೂ ವೆಚ್ಚದಲ್ಲಿ ಕೆಸಿ ಜನರಲ್ ಆಸ್ಪತ್ರೆಯಲ್ಲಿ 50 ಹಾಸಿಗೆ, ಹುಬ್ಬಳ್ಳಿಯಲ್ಲಿ 430 ಹಾಸಿಗೆ ಸಾಮರ್ಥ್ಯಗಳುಳ್ಳ ಹೃದ್ರೋಗ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಈಗಾಗಲೇ ನಿರ್ಮಾಣ ಹಂತದಲ್ಲಿರುವ 450 ಹಸಿಗೆ ಸಾಮರ್ಥ್ಯದ ಚಿಕಿತ್ಸಾ ಕೇಂದ್ರದ ನಿರ್ಮಾಣ ಕೆಲಸವನ್ನು ಪೂರ್ಣಗೊಳಿಸಲಾಗುವುದು. ಬೆಂಗಳೂರಿನ ಆ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧಮಾ ಸಂಸ್ಥೆಯಲ್ಲಿ 500 ಹಾಸಿಗೆಗಳ ಸಾಮರ್ಥ್ಯವುಳ್ಳ ಆಸ್ಪತ್ರೆಯನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದೆ.
ಇದನ್ನೂ ಓದಿ: ರಾಜ್ಯ ಬಜೆಟ್ನಲ್ಲಿ ಈ ಬಾರಿ ನಗರಾಭಿ ವೃದ್ಧಿಗಾಗಿ ವಿಶೇಷ ಆದ್ಯತೆ..! ಬೆಂಗಳೂರಿಗೆ ಸಿಕ್ಕಿದ್ದೇನು?