ಬೆಂಗಳೂರು: ನಗರದಲ್ಲಿ ಪ್ರತಿದಿನ ಸಾವಿರ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಇದನ್ನು ತಡೆಯುವ ಉದ್ದೇಶದಿಂದ ರಾಜ್ಯದಲ್ಲಿ ಪ್ರತೀ ಭಾನುವಾರ ಸಂಪೂರ್ಣ ಲಾಕ್ಡೌನ್ ಘೋಷಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಿಎಂ ಆದೇಶದಂತೆ ಇಂದು ಸಂಜೆ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೂ ಕಂಪ್ಲೀಟ್ ಲಾಕ್ಡೌನ್ ಇರಲಿದೆ. ಕೇವಲ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶವಿದೆ.
ಮಾಂಸದ ಅಂಗಡಿ, ಹಣ್ಣು-ತರಕಾರಿ ಅಂಗಡಿಗಳು ತೆರೆದಿರಲಿವೆ. ಈ ಲಾಕ್ಡೌನ್ ಅವಧಿಯಲ್ಲಿ ಸಾರ್ವಜನಿಕರು ಹೊರಗಡೆ ಓಡಾಡುವ ಸಂದರ್ಭ ಬಂದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅನಗತ್ಯವಾಗಿ ಓಡಾಟ ಮಾಡಬಾರದು. ಪೊಲೀಸ್, ಬಿಬಿಎಂಪಿ ಹಾಗೂ ಆರೋಗ್ಯ ಅಧಿಕಾರಿಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಅನಗತ್ಯ ಓಡಾಟ ಮಾಡಿದಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ. ಕೋವಿಡ್ ಸೋಂಕು ಹರಡುವಿಕೆ ತಡೆಯಲು ಈ ಲಾಕ್ಡೌನ್ ಯಶಸ್ವಿ ಮಾಡಬೇಕಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಹೇಳಿದ್ದಾರೆ.